ಬಾಹುಬಲಿ-2 ಚಿತ್ರಕ್ಕೆ ಟೆನ್ಷನ್ ಟೆನ್ಷನ್

ರಾಜಮೌಳಿಯ ಮಹತ್ವಾಕಾಂಕ್ಷೆಯ ಬಾಹುಬಲಿ-2 ಚಿತ್ರದ ಬಿಡುಗಡೆಗೆ ಇನ್ನು ಉಳಿದಿರುವುದು ಕೇವಲ 12 ದಿನಗಳು. ಆದರೆ ಇದೀಗ ಬಾಹುಬಲಿ-2 ಚಿತ್ರದ ಕುರಿತು ಒಂದೊಂದೇ ಶಾಕಿಂಗ್ ಸುದ್ದಿಗಳು ಹೊರ ಬೀಳುತ್ತಿವೆ.

ಕಟ್ಟಪ್ಪ ಪಾತ್ರಧಾರಿ ತಮಿಳು ನಟ ಸತ್ಯರಾಜ್ ಈ ಹಿಂದೆ ಕನ್ನಡಿಗರು ಮತ್ತು ಕರ್ನಾಟಕದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಕರ್ನಾಟಕದ ರಿಲೀಸ್ ಹಕ್ಕುಗಳನ್ನು ಭಾರೀ ಮೊತ್ತಕ್ಕೆ ಮಾರಾಟ ಮಾಡುವ ನಿರ್ಮಾಪಕರ ಯತ್ನಕ್ಕೆ ಕಲ್ಲು ಬಿದ್ದಿದೆ. ಸತ್ಯರಾಜ್ ಕನ್ನಡಿಗರ ಕ್ಷಮೆ ಕೇಳದಿದ್ದಲ್ಲಿ ಕರ್ನಾಟಕದಲ್ಲಿ ಸತ್ಯರಾಜ್ ನಟಿಸಿರುವ ಚಿತ್ರ ಬಿಡುಗಡೆ ತಡೆಯುತ್ತೇವೆ ಎಂದು ಈಗಾಗಲೇ ಕನ್ನಡ ಪರ ಸಂಘಟನೆಗಳು ಎಚ್ಚರಿಸಿವೆ. ಕನ್ನಡದಲ್ಲಿ ಚಿತ್ರ ಬಿಡುಗಡೆಗೆ ವಿತರಕರು ಹಿಂದೇಟು ಹಾಕುತ್ತಿರುವುದರಿಂದ ಅನ್ಯ ಮಾರ್ಗವಿಲ್ಲದೆ ಚಿತ್ರ ನಿರ್ಮಾಪಕರೇ ಚಿತ್ರ ಬಿಡುಗಡೆಗೆ ಮುಂದಾಗಿದ್ದಾರೆ. ಅತ್ತ ತಮಿಳುನಾಡಿನಲ್ಲೂ ಬಾಹುಬಲಿ ತಮಿಳು ಅವತರಣಿಕೆಯ ಹಕ್ಕುಗಳನ್ನು ಪಡೆದಿರುವವರ ವಿರುದ್ಧ ವಿತರಕರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದು ಚಿತ್ರ ಬಿಡುಗಡೆಗೆಗೆ ತಡೆ ನೀಡುವಂತೆ ಒತ್ತಾಯಿಸಿದ್ದಾರೆ.

ಬಾಹುಬಲಿ-1 ಚಿತ್ರವನ್ನು ಕಡಿಮೆ ಮೊತ್ತಕ್ಕೆ ಖರೀದಿಸಿ ಭಾರೀ ಲಾಭ ಗಳಿಸಿದ ತೆಲುಗು ರಾಜ್ಯಗಳ ವಿತರಕರು ಈಗ ಭಾರೀ ಮೊತ್ತ ತೆತ್ತು ಚಿತ್ರದ ವಿತರಣೆ ಹಕ್ಕುಗಳನ್ನು ಪಡೆಯಲು ಅಡ್ವಾನ್ಸ್ ನೀಡಿದ್ದಾರೆ. ಈಗ ಅಷ್ಟು ಬಂಡವಾಳ ಹಾಕಿದರೆ ಹಣ ವಾಪಸ್ ಬರುತ್ತದಾ ಅಂತ ಚಿಂತೆಗೆ ಬಿದ್ದಿರುವ ವಿತರಕರು ಬಾಕಿ ಹಣವನ್ನು ಪಾವತಿಸಲು ಕೊನೆ ಕ್ಷಣದಲ್ಲಿ ಹಿಂದೆ ಮುಂದೆ ನೋಡುತ್ತಿದ್ದಾರೆ. ಇದರಿಂದಾಗಿ ಸಂಯಮ ಕಳೆದುಕೊಂಡ ನಿರ್ಮಾಪಕರು ಬಾಕಿ ಉಳಿಸಿಕೊಂಡಿರುವ ವಿತರಕರಿಗೆ ಪೂರ್ತಿ ಹಣ ಚುಕ್ತಾ ಮಾಡಲು ಡೆಡ್ ಲೈನ್ ವಿಧಿಸಿದ್ದಾರಂತೆ. ಏಪ್ರಿಲ್ 19 ರೊಳಗೆ ಪೂರ್ತಿ ಹಣ ನೀಡದಿದ್ದರೆ ಇತರೆ ವಿತರಕರಿಗೆ ನೀಡುತ್ತೇವೆ, ಇಲ್ಲವೆಂದರೆ ನಾವೇ ರಿಲೀಸ್ ಮಾಡುತ್ತೇವೆ ಎಂದು ಹೆದರಿಸುತ್ತಿದ್ದಾರಂತೆ.