ಮತ್ತೊಮ್ಮೆ ಕೇಜ್ರಿವಾಲ್ ಗೆ ದಂಡ ವಿಧಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮತ್ತೊಮ್ಮೆ ನ್ಯಾಯಾಲಯದ ದಂಡ ವಿಧಿಸಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ್ದ ಸಮಯದೊಳಗೆ ಉತ್ತರಿಸಲು ಕೇಜ್ರಿವಾಲ್ ವಿಫಲರಾಗಿದ್ದರು. ಹೀಗಾಗಿ ಅವರಿಗೆ ದೆಹಲಿ ಹೈಕೋರ್ಟ್ ರೂ.5 ಸಾವಿರ ದಂಡ ವಿಧಿಸಿದೆ. ಈ ಹಿಂದೆಯೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರೂ.10 ಸಾವಿರ ದಂಡವನ್ನು ಕೇಜ್ರಿವಾಲ್ ಪಾವತಿಸಿದ್ದರು.

ಜೇಟ್ಲಿಯವರು ಹೂಡಿದ್ದ ಮಾನ ನಷ್ಟ ಪ್ರಕರಣದಲ್ಲಿ ಜೇಟ್ಲಿ ಪರ ವಕೀಲ ಮಾಣಿಕ್ ಡೋಗ್ರಾ ಸೋಮವಾರ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಕೋರ್ಟ್ ನೀಡಿದ್ದ ಗಡುವಿನೊಳಗೆ ಉತ್ತರ ನೀಡುವಲ್ಲಿ ಕೇಜ್ರಿವಾಲ್ ವಿಫಲರಾಗಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು. ಕೇಜ್ರಿವಾಲ್ ರವರಿಗೆ ಜುಲೈ 26 ರೊಳಗೆ ಉತ್ತರಿಸುವಂತೆ ಕೋರ್ಟ್ ಆದೇಶಿಸಿತ್ತು ಎಂದು ಡೋಗ್ರಾ ಕೋರ್ಟ್ ಗೆ ನೆನಪಿಸಿದರು. ವಿಳಂಬ ಧೋರಣೆ ಮಖ್ಯಮಂತ್ರಿ ಕೇಜ್ರಿವಾಲ್ ತಂತ್ರದ ಭಾಗವೆಂದು ಜೇಟ್ಲಿ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದರು. ಹೀಗಾಗಿ ಕೋರ್ಟ್ ಕೇಜ್ರಿವಾಲ್ ಗೆ ದಂಡ ವಿಧಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12 ಕ್ಕೆ ಮುಂದೂಡಿದೆ.

ಡಿಡಿಸಿಎ ಪ್ರಕರಣದಲ್ಲಿ ಅಕ್ರಮ ಎಸಗಿದ್ದಾರೆ ಎಂದು ಕೇಜ್ರಿವಾಲ್ ಮಾಡಿದ್ದ ಆರೋಪಗಳ ವಿರುದ್ಧ ಅರುಣ್ ಜೇಟ್ಲಿ ರೂ.10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆದರೆ ಆ ಕೇಸು ವಿಚಾರಣೆಯಲ್ಲಿಯೇ ಕೇಜ್ರಿವಾಲ್ ಪರ ವಕೀಲ್ ರಾಮ್ ಜೇಠ್ಮಲಾನಿ ಜೇಟ್ಲಿ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಿಸಿದ್ದರು. ಹೀಗಾಗಿ ಜೇಟ್ಲಿಯವರು ಮತ್ತೊಮ್ಮೆ 10 ಕೋಟಿಯ ಮಾನನಷ್ಟ ಮೊಕದ್ದಮೆಯನ್ನು ಹೂಡಿದರು.