ಎರಡು ಎಲೆಗಳಿಗೆ 50 ಕೋಟಿ ಲಂಚ, ದಿನಕರನ್ ವಿರುದ್ಧ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು |News Mirchi

ಎರಡು ಎಲೆಗಳಿಗೆ 50 ಕೋಟಿ ಲಂಚ, ದಿನಕರನ್ ವಿರುದ್ಧ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು

ಜಯಲಲಿತಾ ನಿಧನದ ನಂತರ ತೆರವಾಗಿದ್ದ ತಮಿಳುನಾಡಿನ ಆರ್.ಕೆ ನಗರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎಐಎಡಿಎಂಕೆ ಚಿಹ್ನೆಯಾದ ಎರಡು ಎಲೆಗಳ ಗುರುತನ್ನು ತಮ್ಮ ಬಣಕ್ಕೆ ಪಡೆಯಲು 50 ಕೋಟಿ ಲಂಚ ನೀಡಲು ಪ್ರಯತ್ನಿಸಿದ ಆರೋಪದ ಮೇಲೆ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ ದಿನಕರನ್ ಅವರ ವಿರುದ್ಧ ದೆಹಲಿಯ ಕ್ರೈಮ್ ಬ್ರಾಂಚ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಂಗಳವಾರ ಚೆನ್ನೈನಲ್ಲಿ ಹಾಜರಾಗಲು ದಿನಕರನ್ ಗೆ ಸೂಚಿಸಿದ್ದಾರೆ.

ಚುನಾವಣಾ ಚಿಹ್ನೆಗೆ ಲಂಚ ನೀಡಲು ಮಧ್ಯವರ್ತಿಯಾಗಿ ಕೆಲಸ ಮಾಡಿದ ಆರೋಪದ ಮೇಲೆ ಪೊಲೀಸರು ಸುಖೇಶ್ ಚಂದ್ರಶೇಖರ್ ಎಂಬಾತನನ್ನು ಬಂಧಿಸಿದ್ದರು. ಇದೀಗ ಜೈಲುವಾಸ ಅನುಭವಿಸುತ್ತಿರುವ ವಿ.ಕೆ.ಶಶಿಕಲಾ ಸಂಬಂಧಿಯಾಗಿರುವ ದಿನಕರನ್ ವಿರುದ್ಧ ಕ್ರೈಂ ಬ್ರಾಂಚ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಶಶಿಕಲಾ ಬಣಕ್ಕೆ ಎರಡು ಎಲೆಗಳ ಚಿಹ್ನೆ ಪಡೆಯಲು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಸುಖೇಶ್ ಚಂದ್ರಶೇಖರ್ ಎಂಬಾತ ರೂ.50 ಕೋಟಿ ಲಂಚ ನೀಡಲು ಡೀಲ್ ಕುದುರಿಸಿದ್ದ ಎನ್ನಲಾಗಿದೆ. ಸುಖೇಶ್ ನಿಂದ 1.30 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದ ಪೊಲೀಸರು, ಆತನ ಬಿಎಂಡಬ್ಲ್ಯೂ ಮತ್ತು ಮರ್ಸಿಡೀಸ್ ಕಾರುಗಳನ್ನು ಸೀಜ್ ಮಾಡಿದ್ದರು. ಪ್ರಕರಣದಲ್ಲಿ ಸುಖೇಶ್ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ವಿಚಾರಣೆ ನಡೆಸುತ್ತಿದ್ದೇವೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉಪಚುನಾವಣೆಯಲ್ಲಿ ಸ್ಪರ್ಧಿಸಲು ಎರಡು ಎಲೆಗಳ ಚಿಹ್ನೆಯನ್ನು ತಮ್ಮ ಬಣಕ್ಕೇ ನೀಡಬೇಕು ಎಂದು ಶಶಿಕಲಾ ಮತ್ತು ಪನ್ನೀರ್ ಸೆಲ್ವಂ ಬಣ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು. ಆದರೆ ಇಬ್ಬರಿಗೂ ಆ ಚಿಹ್ನೆಯನ್ನು ನೀಡದ ಚುನಾವಣಾ ಆಯೋಗ, ಎರಡೂ ಬಣಗಳಿಗೆ ಬೇರೆ ಬೇರೆ ಚಿಹ್ನೆ ನೀಡಿತ್ತು.

Loading...
loading...
error: Content is protected !!