ಮೋದಿ ಕ್ರಮಕ್ಕೆ ಅಪೂರ್ವ ಜನ ಬೆಂಬಲ

ನೊಟು ರದ್ದು ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ದೇಶದ ಜನತೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೋದಿ ಪ್ರತ್ಯೇಕ ಮೊಬೈಲ್ ಆಪ್ ಮೂಲಕ ಕೈಗೊಂಡ ಸಮೀಕ್ಷೆಯಲ್ಲಿ ಪಾಲ್ಗೊಂಡ 5 ಲಕ್ಷ ಜನರಲ್ಲಿ, ಶೇ.90 ರಷ್ಟು ಜನ ರೂ. 500, 1000 ರ ನೋಟು ರದ್ದು ತೀರ್ಮಾನವನ್ನು ಸರಿ ಎಂದು ಒಪ್ಪಿಕೊಂಡಿದ್ದಾರೆ. ಸರ್ಕಾರ ಕಪ್ಪು ಹಣ ನಿರ್ಮೂಲನೆಗೆ ಕೈಗೊಂಡ ಕ್ರಮಗಳು ಅತ್ಯುತ್ತಮವಾಗಿವೆ ಎಂದು ಶೇ. 74 ರಷ್ಟು ಜನ ಹೇಳಿದ್ದರೆ, ಶೇ. 16 ರಷ್ಟು ಜನ ಉತ್ತಮ ಎಂದಿದ್ದಾರೆ.

ನೋಟು ರದ್ದು ಕ್ರಮದಿಂದ ಕಪ್ಪು ಹಣ, ಭಯೋತ್ಪಾದನೆ, ಭ್ರಷ್ಟಾಚಾರಗಳ ಮೇಲೆ ತಕ್ಷಣ ಪ್ರಭಾವ ಬೀರುತ್ತದೆಯೇ ಎಂಬ ಪ್ರಶ್ನೆಗೆ ಶೇ. 50 ರಷ್ಟು ಜನ ಹೌದು ಎಂದಿದ್ದು, ಮಧ್ಯಮ ಹಾಗೂ ದೀರ್ಘ ಕಾಲದಲ್ಲಿ ಫಲಿತಾಂಶ ಸಾಧಿಸಬಹುದು ಎಂದು ಶೇ. 42 ರಷ್ಟು ಜನ ಹೇಳಿದ್ದಾರೆ.

ಭ್ರಷ್ಟಾಚಾರಕ್ಕೆ ವಿರುದ್ಧವಾಗಿ ಮೋದಿ ಸರ್ಕಾರ ಕೈಗೊಂಡ ಕ್ರಮ ಸರಿಯಾಗಿದೆ ಎಂದು ಶೇ. 92 ರಷ್ಟು ಜನ ಹೇಳಿದ್ದಾರೆ.

ಈ ಹಿಂದೆ ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಕೆಲವರು, ಈಗ ಕಪ್ಪು ಹಣಕ್ಕೆ ಬೆಂಬಲಿಸುತ್ತಿದ್ದಾರಾ ಎಂದು ಕೇಳಿದ ಪ್ರಶ್ನೆಗೆ ಶೇ. 86 ರಷ್ಟು ಜನ ಹೌದೆಂದು ಹೇಳಿದ್ದಾರೆ.

ಕಪ್ಪು ಹಣದ ವಿರುದ್ಧ ಹೋರಾಟದಲ್ಲಿ ಎದುರಾಗುವ ಸಮಸ್ಯೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಶೇ. 43 ರಷ್ಟು ಜನ ಹೇಳಿದ್ದರೆ, ಶೇ. 48 ಜನ ಕೆಲ ಸಮಸ್ಯೆಗಳಿದ್ದರೂ ಎದುರಿಸಲು ಸಿದ್ಧ ಎಂದಿದ್ದಾರೆ.

24 ಗಂಟೆಗಳ ಅವಧಿಯಲ್ಲಿ ನಡೆದ ಈ ಸಮೀಕ್ಷೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಸಮೀಕ್ಷೆ ಫಲಿತಾಂಶದ ಬಗ್ಗೆ ಪ್ರಧಾನಿ ಮೋದಿ ಟ್ವಿಟರ್ ನಲ್ಲಿ ಹರ್ಷ ವ್ಯಕ್ತಪಡಿಸಿದರು. ಬೆಂಬಲಿಸಿದ ಜನರಿಗೆ ಕೃತಜ್ಞತೆ ತಿಳಿಸಿದರು.

ನೋಟು ರದ್ದು ತೀರ್ಮಾನದಿಂದ ಪ್ರಜೆಗಳು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಸಂಸತ್ತಿನಲ್ಲಿ ಪ್ರತಿಪಕ್ಷಗಳು ಗದ್ದಲ ಮಾಡುತ್ತಿರುವ ಸಂದರ್ಭದಲ್ಲಿ ಈ ಫಲಿತಾಂಶ ಪ್ರಕಟವಾಗಿರುವುದು ವಿಶೇಷ.

ಆದರೆ ಈ ಫಲಿತಾಂಶ ಸದ್ಯದ ಪರಿಸ್ಥಿತಿಗೆ ಕನ್ನಡಿಯಲ್ಲ ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ಕೇವಲ ನಗರ ಪ್ರದೇಶದ ಪ್ರಜೆಗಳೇ ಈ ಸರ್ವೇಯಲ್ಲಿ ಪಾಲ್ಗೊಂಡಿದ್ದಾರೆಂದು, ಗ್ರಾಮೀಣ ಜನರು ಸರ್ಕಾರದ ನಿರ್ಧಾರದ ವಿರುದ್ಧ ಇದ್ದಾರೆ ಎಂದು ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ, ಸಿಪಿಐ ನಾಯಕ ಡಿ.ರಾಜಾ ಹೇಳಿದ್ದಾರೆ.