ಭಾರತದಲ್ಲಿ ನೋಟು ರದ್ದು: ವಿದೇಶಿ ಮಾಧ್ಯಮಗಳು ಹೇಳಿದ್ದೇನು? – News Mirchi

ಭಾರತದಲ್ಲಿ ನೋಟು ರದ್ದು: ವಿದೇಶಿ ಮಾಧ್ಯಮಗಳು ಹೇಳಿದ್ದೇನು?

ರೂ. 500, 1000 ನೋಟುಗಳನ್ನು ರದ್ದು ಮಾಡುತ್ತಿರುವಂತೆ ಪ್ರಧಾನಿ ಮೋದಿ ಪ್ರಕಟಿಸಿದ ಕ್ಷಣದಿಂದ ದೇಶದ‌ ಮಾಧ್ಯಮಗಳು, ಸಾಮಾಜಿಕ ತಾಣಗಳಲ್ಲಿ ಅದರದೇ ಸುದ್ದಿ. ಪಾಕಿಸ್ತಾನದ ಕೆಲ ಮಾಧ್ಯಮಗಳೂ ಮೋದಿ ನಿರ್ಧಾರವನ್ನು ಹೊಗಳಿ ಚರ್ಚೆ ನಡೆಸುತ್ತಿವೆ. ಈಗ ವಿದೇಶಿ ಮಾಧ್ಯಮಗಳಲ್ಲೂ ಭಾರತದಲ್ಲಿನ ನೋಟು ರದ್ದು ವಿಷಯದ ಕುರಿತು ದೀರ್ಘ ಲೇಖನಗಳನ್ನು ಪ್ರಕಟಿಸಿವೆ. ಇಲ್ಲಿ ಕೆಲ ವಿದೇಶಿ ಪತ್ರಿಕೆಗಳ ಏನು ಹೇಳಿವೆ ಎಂಬುದನ್ನು ಸಂಕ್ಷಿಪ್ತವಾಗಿ ಕೊಡಲಾಗಿದೆ.

ದಿ ವಾಷಿಂಗ್ಟನ್ ಪೋಸ್ಟ್

ಕಪ್ಪು ಹಣದ ವಿರುದ್ಧದ ಹೋರಾಟದ ಭಾಗವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ದೊಡ್ಡ ನೋಟು ರದ್ದು ಮಾಡಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ದೇಶ ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ಮತ್ತು ದೇಶಕ್ಕೆ ವಿದೇಶಿ ಬಂಡವಾಳ ಕರೆತರಲು ಈ ಕ್ರಮ ಕೈಗೊಂಡಿದ್ದಾರೆ ಎಂದು ಪತ್ರಿಕೆ ಹೇಳಿದೆ. ಇದಕ್ಕೂ ಮುನ್ನ ಭಾರತದ ಪ್ರಧಾನಿ ಕಪ್ಪು ಹಣವನ್ನು ತಮ್ಮಷ್ಟಕ್ಕೆ ತಾವೇ ಘೋಷಿಸಬೇಕು ಎಂದು ಸಮಯ ನೀಡಿದ್ದರು. ಇದರ ಮೂಲಕ 19 ಬಿಲಿಯನ್ ಡಾಲರ್ ಕಪ್ಪುವಹಣವನ್ನು ಭಾರತೀಯರು ಘೋಷಿಸಿಕೊಂಡಿದ್ದರು. ಭಾರತದಲ್ಲಿ ಒಟ್ಟು 1 ಟ್ರಿಲಿಯನ್ ಡಾಲರ್ ಕಪ್ಪು ಹಣವಿದೆ ಎಂದು ವಾಷಿಂಗ್ಟನ್ ಪೋಸ್ಟ್ ಹೇಳಿದೆ.

ಸಿಡ್ನಿ ಮಾರ್ನಿಂಗ್ ಹೆರಾಲ್ಡ್

ತೆರಿಗೆ ವಂಚಕರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಚುನಾವಣಾ ಪ್ರಚಾರದಲ್ಲಿ ಹೇಳಿದ್ದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಹೇಳಿದ್ದ‌ ಮಾತಿನಂತೆ ದೊಡ್ಡ ನೋಟು ರದ್ದು ಮಾಡಿದ್ದಾರೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಹೇಳಿದೆ. ಕಪ್ಪು ಹಣದ ಪ್ರವಾಹವನ್ನು ತಡೆಯಲು ಯೂರೋಪಿಯನ್ ಸೆಂಟ್ರಲ್ ಬ್ಯಾಂಕು 500 ಯೂರೋ ನೋಟು ರದ್ದು ಮಾಡಿದ್ದ ವಿಷಯವನ್ನು ಈ ಸಂದರ್ಭದಲ್ಲಿ ನೆನಪಿಸಿದೆ.

ದಿ ಇಂಡಿಪೆಂಡೆಂಟ್

ಭಾರತದ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಕಪ್ಪು ಹಣ ಕುರಿತ ತೀರ್ಮಾನ ಅವರ ಬಗ್ಗೆ ಜನರಲ್ಲಿದ್ದ ಗೌರವವನ್ನು ಹೆಚ್ಚಿಸಿದೆ ಎಂಬುದು ಕಂಡುಬರುತ್ತಿದೆ ಎಂದು ಹೇಳಿದೆ. ಭಾರತ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮೋದಿಯನ್ನು ಸಿಂಗಾಪುರದ ಮೊದಲ ಪ್ರಧಾನ ಮಂತ್ರಿ ಲೀ ಕುವಾನ್ ಯೇವ್ ಅವರೊಂದಿಗೆ ಹೋಲಿಸಿದ್ದಾರೆ ಎಂದು ಬರೆದಿದೆ.

ನ್ಯೂಯಾರ್ಕ್ ಟೈಮ್ಸ್

ನೋಟು ರದ್ದು ನಿರ್ಧಾರವನ್ನು ಮೋದಿ ಪ್ರಕಟಿಸುವವರೆಗೂ ರಹಸ್ಯವಾಗಿ ಇಟ್ಟಿದ್ದರು ಎಂದು ಹೇಳಿದೆ. ಮೋದಿಯ ಐತಿಹಾಸಿಕ ತೀರ್ಮಾನದಿಂದ ಭಾರತದ ದಿಕ್ಕೇ ಬದಲಾಗಲಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ ಎಂದು ಬರೆದಿದೆ.

ವಾಲ್ ಸ್ಟ್ರೀಟ್ ಜರ್ನಲ್

ಮೋದಿ ಕೈಗೊಂಡ ನಿರ್ಧಾರ ಯಶಸ್ವಿಯಾದರೆ, ಸರ್ಕಾರಕ್ಕೆ ಪಾವತಿಯಾಗುವ ಟ್ಯಾಕ್ಸ್ ನಲ್ಲಿ ಭಾರಿ ಹೆಚ್ಚಳವಾಗುತ್ತದೆ, ಮೋದಿ ನಿರ್ಧಾರದ ನಂತರ ಭಾರೀ ಪ್ರಮಾಣದಲ್ಲಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಲ್ಲಿ ಬಂಡವಾಳ ಹೂಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದೆ. ಇದು ಮೋದಿ ಕೈಗೊಂಡ ನಿರ್ಧಾರ ಯಶಸ್ವಿಯಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದು ಬರೆದಿದೆ.

ನಮ್ಮ ಸ್ಥಳೀಯ ಸುದ್ದಿವಾಹಿನಿಗಳು

ಆರಂಭದಲ್ಲಿ ಮೋದಿ ನಿರ್ಧಾರವನ್ನು ಹೊಗಳಿ ಪ್ರಸಾರ ಮಾಡಿದ ನಮ್ಮ ಕೆಲವು ನ್ಯೂಸ್ ಚಾನೆಲ್ ಗಳು, ಈಗ ಯೂ ಟರ್ನ್ ಹೊಡೆದು ಜನ ಸಾಲಿನಲ್ಲಿ ಎಟಿಎಂ ಮುಂದೆ ನಿಲ್ಲುತ್ತಿರುವುದನ್ನೇ ಪದೇ ಪದೇ ಪ್ರಸಾರ ಮಾಡಿ ಸರ್ಕಾರದ ಉದ್ದೇಶವನ್ನೇ ಪ್ರಶ್ನಿಸುವಂತೆ ವರ್ತಿಸುತ್ತಿವೆ. ತಾತ್ಕಾಲಿಕ ಸಮಸ್ಯೆಗಳನ್ನು ದೊಡ್ಡದಾಗಿ ಬಿಂಬಿಸಿ ಜನರಲ್ಲಿ ಆತಂಕ ಹುಟ್ಟಿಸುವ ಬದಲು ನೋಟು ರದ್ದುಗೊಂಡಿರುವುದರಿಂದ ಭವಿಷ್ಯದಲ್ಲಿ ಆಗುವ ಅನುಕೂಲ ಅನಾನುಕೂಲಗಳ ಬಗ್ಗೆ ಉತ್ತಮ ಚರ್ಚೆ ನಡೆಸಬಹುದಿತ್ತು. ಆಶ್ಚರ್ಯ ಎಂದರೆ, ಟಿವಿ ಚಾನೆಲ್ ಗಳು ಕ್ಯೂನಲ್ಲಿ ನಿಂತಿರುವ ಯಾರೊಬ್ಬರನ್ನು ಮಾತನಾಡಿಸಿದರೂ, ತಮ್ಮ ಸದ್ಯದ ಸಮಸ್ಯೆಯನ್ನು ಮರೆತು ಸರ್ಕಾರದ ಉತ್ತಮ ನಿರ್ಧಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

Click for More Interesting News

Loading...

Leave a Reply

Your email address will not be published.

error: Content is protected !!