ಜನ್ ಧನ್ ಖಾತೆಗಳಿಗೆ ಹರಿದು ಬಂತು ₹64,250 ಕೋಟಿ !

ಜನ್ ಧನ್ ಯೋಜನೆಯಲ್ಲಿ ತೆರೆದ ಜೀರೋ ಬ್ಯಾಲೆನ್ಸ್ ಖಾತೆಗಳಿಗೆ ಸಾವಿರಾರು ಕೋಟಿ ರೂಪಾಯಿ ಹರಿದು ಬರುತ್ತಿದೆ. ಮೊನ್ನೆಯಷ್ಟೇ ಈ ಯೋಜನೆಯಡಿ ತೆರೆದ ಖಾತೆಗಳಲ್ಲಿ 21 ಸಾವಿರ ಕೋಟಿ ರೂಪಾಯಿ ಜಮೆಯಾಗಿದೆ ಎಂದು ಹೇಳಲಾಗಿತ್ತು. ಇದೀಗ ಆ ಮೊತ್ತ ಮತ್ತಷ್ಟು ಹೆಚ್ಚಾಗಿದ್ದು, ಇಂದಿನವರೆಗೆ ರೂ. 64,250 ಕೋಟಿ ರೂಪಾಯಿ ಡಿಪಾಸಿಟ್ ಆಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಹೇಳಿದೆ.

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ ರೂ. 10,670 ಕೋಟಿ ಜಮೆಯಾಗಿದ್ದರೆ, ಪಶ್ಚಿಮ ಬಂಗಾಳ ಎರಡನೇ ಸ್ಥಾನದಲ್ಲಿ ನಿಂತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ಖಾತೆಗಳು ಇಲ್ಲದವರನ್ನು ಆರ್ಥಿಕ ವ್ಯವಸ್ಥೆಯಲ್ಲಿ ಪಾಲುದಾರರನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಸುಮಾರು 23 ಕೋಟಿ ಜನ್ ಧನ್ ಅಕೌಂಟ್ ತೆರೆಯುವಂತೆ ಮಾಡಿತ್ತು. ಬಹುತೇಕ ಖಾತೆಗಳು ತೆರೆದಿದ್ದು ಬಿಟ್ಟರೆ ಹಣ ಜಮೆ ಮಾಡಿದ್ದು, ತೆಗೆದಿದ್ದು ಅಪರೂಪ.

ಆದರೆ ಹಳೆಯ ನೋಟು ರದ್ದುಗೊಳ್ಳುತ್ತಿದ್ದಂತೆ ಅಂತಹ ಖಾತೆಗಳಿಗೆ ಹಣದ ಹೊಳೆ ಹರಿದು ಬರುತ್ತಿದೆ. ಕಪ್ಪು ಹಣ ಬಿಳಿ ಮಾಡಿಕೊಳ್ಳಲು ಇಂತಹವರ ಖಾತೆಗಳನ್ನು ಮಧ್ಯವರ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವ ಅನುಮಾನಗಳೂ ವ್ಯಕ್ತವಾಗುತ್ತಿವೆ.