ಜಯಾ ನಿಧನದ ಸುದ್ದಿಯನ್ನು ರಹಸ್ಯವಾಗಿ ಇಡಲಾಗಿತ್ತೇ?

ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ತಮ್ಮ 68 ನೇ ವರ್ಷದಲ್ಲಿ ತಮಿಳುನಾಡು ರಾಜಕಾರಣದಲ್ಲಿ ಹಲವು ಗೊಂದಲಗಳನ್ನು ಉಳಿಸಿ ನಿಧನರಾಗಿದ್ದರು. ತಮ್ಮ ರಾಜಕೀಯ ಗುರುಗಳಾದ ಎಂ.ಜಿ ರಾಮಚಂದ್ರನ್ ರವರ ಸಮಾಧಿ ಪಕ್ಕದಲ್ಲೇ ಅವರ ಅಂತ್ಯ ಸಂಸ್ಕಾರಗಳೂ ನಡೆದವು.

ಅಧಿಕೃತ ಮೂಲಗಳ ಪ್ರಕಾರ ಜಯಲಲಿತಾ, ಡಿಸೆಂಬರ್ 5 ರ ರಾತ್ರಿ 11:30 ಸಮಯಕ್ಕೆ ನಿಧನರಾದರು. ಆದರೆ ಆಕೆಯ ಅಂತ್ಯಸಂಸ್ಕಾರದ ನಂತರ ಆಕೆಯ ಕೊನೆ ಕ್ಷಣಗಳ ಕುರಿತ ಕೆಲವು ಸತ್ಯ ಸಂಗತಿಗಳು ಬೆಳಕಿಗೆ ಬರುತ್ತಿವೆ.

ಅಪೋಲೋ ಆಸ್ಪತ್ರೆ ಅಧಿಕೃತವಾಗಿ ಘೋಷಿಸಿದಂತೆ ಜಯಾ ಡಿಸೆಂಬರ್ 5 ರಾತ್ರಿ 11:39 ಕ್ಕೆ ಕೊನೆಯುಸಿರೆಳೆದರು. ಆದರೆ ಈಗ ಆಕೆಯ ಸಾವಿನ ಬಗ್ಗೆ ಹಲವು ಪ್ರಶ್ನೆಗಳು ಏಳುತ್ತಿವೆ. ಇದಕ್ಕೂ ಒಂದು ದಿನ ಹಿಂದೆಯೇ ಅಂದರೆ ಡಿಸೆಂಬರ್ 4 ರಂದೇ ಜಯಾ ಸಾವನ್ನಪ್ಪಿದ್ದರು ಎನ್ನಲಾಗುತ್ತಿದೆ. ಡಿಸೆಂಬರ್ 4 ರಂದೇ ಜಯಾ ಅಂತ್ಯ ಸಂಸ್ಕಾರ ನಡೆದ ರಾಜಾಜಿ ಹಾಲ್ ಸ್ವಚ್ಛಗೊಳಿಸಲು ಎಐಎಡಿಎಂಕೆ ಪಕ್ಷದ ಮುಖಂಡರು ಆದೇಶಿಸಿದ್ದು ಈ ಅನುಮಾನಕ್ಕೆ ಪುಷ್ಟಿ ನೀಡುತ್ತಿದೆ.

ಡಿಸೆಂಬರ್ 4 ರಂದೇ ಜಯಾ‌ ನಿಧನರಾಗಿದ್ದು ಪಕ್ಷದ ಕೆಲವೇ ಕೆಲವು ಪ್ರಮುಖ ಮುಖಂಡಿರಿಗೆ ತಿಳಿದಿತ್ತು. ಆದರೆ ಪಕ್ಷದಲ್ಲಿನ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಕಾರಣದಿಂದಲೇ ಜಯಾ ನಿಧನದ ಸುದ್ದಿಯನ್ನು ರಹಸ್ಯವಾಗಿ ಇಡಲಾಗಿತ್ತು ಎನ್ನಲಾಗುತ್ತಿದೆ.