ಕ್ರೆಡಿಟ್ ಕಾರ್ಡ್ ಮೇಲೆ ಎರಡು ಬಾರಿ ಜಿಎಸ್ಟಿ ಬೀಳುತ್ತಾ? ಗೊಂದಲ ಬಿಡಿ – News Mirchi

ಕ್ರೆಡಿಟ್ ಕಾರ್ಡ್ ಮೇಲೆ ಎರಡು ಬಾರಿ ಜಿಎಸ್ಟಿ ಬೀಳುತ್ತಾ? ಗೊಂದಲ ಬಿಡಿ

ಜಿಎಸ್ಟಿ ಜಾರಿಗೆ ಬಂದ ನಂತರ ಸಾಮಾಜಿಕ ತಾಣಗಳಲ್ಲಿ ಒಂದು ವದಂತಿ ಹರಿದಾಡುತ್ತಿದೆ. ಕ್ರೆಡಿಟ್ ಕಾರ್ಡ್ ಗಳಿಂದ ಮಾಡುವ ಯಾವುದೇ ಪಾವತಿಗಳಿಗೆ ಎರಡು ಬಾರಿ ಜಿಎಸ್ಟಿ ಬೀಳುತ್ತಿದೆ ಎಂದು ವಾಟ್ಸಾಪ್ ಮತ್ತು ಫೇಸ್ಬುಕ್ ಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಯುಟಿಲಿಟಿ ಬಿಲ್ಲುಗಳ ಮೇಲೆ ಒಮ್ಮೆ, ಕ್ರೆಡಿಟ್ ಕಾರ್ಡ್ ಬಿಲ್ಲುಗಳ ಮೇಲೆ ಮತ್ತೊಮ್ಮೆ, ಹೀಗೆ ಎರಡು ಬಾರಿ ತೆರಿಗೆ ಬೀಳುತ್ತಿದೆ ಎಂದು ಹಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪೆಟ್ರೋಲ್ ಬಂಕ್ ಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿದಾಗ, ಕ್ರೆಡಿಟ್ ಕಾರ್ಡ್ ಮೂಲಕ ಟೆಲಿಫೋನ್, ಗ್ಯಾಸ್, ವಿದ್ಯುತ್, ಮೊಬೈಲ್ ಬಿಲ್ಲು ಪಾವತಿಸಿದ ಸಂದರ್ಭಗಳಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವುದಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಇದು ಕೇವಲ ವದಂತಿಗಳಷ್ಟೇ, ಹೀಗೆ ಎರಡೆರಡು ಬಾರಿ ತೆರಿಗೆ ಬೀಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದು, ವಿವಿಧ ರೀತಿಯಲ್ಲಿ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಿದೆ.

ರೆವಿನ್ಯೂ ಸೆಕ್ರೆಟರಿ ಹಷ್ಮುಖ್ ಅದಿಯಾ ಈಗಾಗಲೇ ಈ ವದಂತಿಗಳನ್ನು ಅಲ್ಲಗೆಳೆದಿದ್ದಾರೆ. ಎರಡು ಬಾರಿ ತೆರಿಗೆ ಬೀಳುತ್ತಿದೆ ಎಂಬುದು ಸಂಪೂರ್ಣ ಸುಳ್ಳು ಪ್ರಚಾರ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಈ ಹಿಂದೆ ಇದ್ದ ಶೇ.15 ರಷ್ಟು ತೆರಿಗೆ, ಜಿಎಸ್ಟಿ ಜಾರಿಯಿಂದ ಶೇ.18 ಕ್ಕೆ ಏರಿದೆ ಅಷ್ಟೇ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಮಾನ್ಯವಾಗಿ ಇಂತಹ ಸೇವಾ ಶುಲ್ಕಗಳನ್ನು ಬ್ಯಾಂಕುಗಳೇ ನಿರ್ವಹಿಸುತ್ತಿವೆ. ಜಿಎಸ್ಟಿ ಜಾರಿಗಿಂತ ಮೊದಲಿನಿಂದಲೇ ಈ ಪದ್ದತಿಯಿದೆ. ಕ್ರೆಡಿಟ್ ಕಾರ್ಡ್ ಬಿಲ್ಲುಗಳ ಮೇಲೆ ಬಡ್ಡಿ, ವಾರ್ಷಿಕ ಶುಲ್ಕ, ಇಎಂಐ ಗಳ ಮೇಲೆ ಪ್ರೊಸೆಸಿಂಗ್ ಶುಲ್ಕ ಮುಂತಾದವುಗಳ ಮೇಲೆ ಈ ಹಿಂದೆ ಶೇ.15 ರಷ್ಟು ತೆರಿಗೆ ಇತ್ತು. ಈಗ ಶೇ.18 ಕ್ಕೇರಿದೆ. ಬಿಲ್ಲುಗಳನ್ನು ಪಾವತಿಸುವಲ್ಲಿ ತಡವಾದಷ್ಟೂ ದಿನಕ್ಕೆ ಶೇ.3 ರಂತೆ ಈ ಹಿಂದಿಗಿಂತ ಸ್ವಲ್ಪ ಹೆಚ್ಚಿಗೆ ಬಡ್ಡಿ ಬೀಳುತ್ತದೆ. ಆದ್ದರಿಂದ ಅಂತಿಮ ಬಿಲ್ಲಿನಲ್ಲಿ ಹೆಚ್ಚು ಶುಲ್ಕ ಕಾಣಿಸುತ್ತದೆ.

ಮತ್ತೊಂದು ಕಡೆ ಮೊಬೈಲು ಬಿಲ್ಲು ಮುಂತಾದ ಸೇವೆಗಳ ಮೇಲೆ ಶುಲ್ಕ ಅಧಿಕವಾಗಿವೆ. ಇದಕ್ಕೂ ಮುನ್ನ ಕೆಲ ರಾಜ್ಯಗಳಲ್ಲಿ ಎಲ್ಪಿಜಿ ಗ್ಯಾಸ್ ಮೇಲೆ ಯಾವುದೇ ತೆರಿಗೆ ಇರಲಿಲ್ಲ, ಮತ್ತೆ ಕೆಲವು ರಾಜ್ಯಗಳಲ್ಲಿ ಶೇ.2 ರಿಂದ ಶೇ.4 ರವರೆಗೆ ತೆರಿಗೆ ಇತ್ತು. ಜಿಎಸ್ಟಿ ಜಾರಿಯಿಂದಾಗಿ ಎಲ್ಪಿಜಿ ಸೇವೆಗಳ ತೆರಿಗೆಯನ್ನು ಶೇ.5 ಕ್ಕೆ ನಿಗದಿ ಮಾಡಿದ್ದಾರೆ. ಹೀಗಾಗಿ ಇವುಗಳ ಮೇಲಿನ ಶುಲ್ಕಗಳು ಹೆಚ್ಚಾಗುತ್ತವೆ.

ಟೆಲಿಕಾಂ ಸೇವೆಗಳ ಮೇಲೆ ಇದ್ದ ಶೇ.15 ರಷ್ಟು ತೆರಿಗೆ ಶೇ.18ಕ್ಕೇರಿದ್ದು, ಮೊಬೈಲ್, ಬ್ರಾಡ್ ಬ್ಯಾಂಡ್ ಬಿಲ್ಲುಗಳಲ್ಲಿ ಏರಿಕೆ ಇರಬಹುದು. ಆದರೆ ಎರಡೆರಡು ಬಾರಿ ತೆರಿಗೆ ಬೀಳುವುದು ಎಂಬುದೆಲ್ಲಾ ಕಟ್ಟುಕಥೆ ಅಷ್ಟೇ.

Loading...