110 ನೇ ವರ್ಷಕ್ಕೆ ಕಾಲಿಟ್ಟ ಸಿದ್ಧಗಂಗಾ ಶ್ರೀಗಳು, ಇಂದು ಗುರುವಂದನಾ ಕಾರ್ಯಕ್ರಮ

ನಡೆದಾಡುವ ದೇವರು, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆಗಳಲ್ಲಿ ಅದ್ವಿತೀಯ ಸೇವೆ ಸಲ್ಲಿಸುತ್ತಿರುವ ಸಿದ್ಧಗಂಗಾ ಮಠದ ತ್ರಿವಿದ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿಗಳು ಇಂದು 110 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಶುಭ ಸಂದರ್ಭದ ಪ್ರಯುಕ್ತ ಇಂದು ಶ್ರೀಗಳ 110 ನೇ ಜನ್ಮ ದಿನೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗುರುವಂದನಾ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯ್ ವಾಲಾ, ಸುತ್ತೂರು ಶ್ರೀ ದೇಶಿಕೇಂದ್ರ ಸ್ವಾಮೀಜಿ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.

ಬಡ ಮಕ್ಕಳಿಗೆ ಜಾತಿ ಪಂಥ ಭೇದವಿಲ್ಲದೆ ಅನ್ನ ದಾಸೋಹ, ಅಕ್ಷರ ದಾಸೋಹದ ಮೂಲಕ ಸೇವೆ ಸಲ್ಲಿಸುತ್ತಿರುವ ಶ್ರೀಗಳಿಗೆ ದೇಶದ ಅತ್ಯುನ್ನತ ಪುರಸ್ಕಾರವಾದ ಭಾರತ ರತ್ನ ನೀಡುವಂತೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ನೇತೃತ್ವದಲ್ಲಿ ಭಕ್ತರು ಶುಕ್ರವಾರ ಸಿದ್ಧಗಂಗಾ ಮಠದಲ್ಲಿ ಉಪವಾಸ ಧರಣಿ ನಡೆಸಿದರು. ಮುಂದೆ ದೆಹಲಿಯಲ್ಲಿ ಸಾವಿರಾರು ಜನರು ಸೇರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದಾಗಿ ರಾಜಶೇಖರ್ ಹೇಳಿದ್ದಾರೆ.