ಹಜ್ ಸಬ್ಸಿಡಿ ಕ್ರಮೇಣ ರದ್ದು, ಬಡವರಿಗೆ ಹೊರೆಯಾಗದಂತೆ ಕ್ರಮಕ್ಕೆ ಶಿಫಾರಸು – News Mirchi

ಹಜ್ ಸಬ್ಸಿಡಿ ಕ್ರಮೇಣ ರದ್ದು, ಬಡವರಿಗೆ ಹೊರೆಯಾಗದಂತೆ ಕ್ರಮಕ್ಕೆ ಶಿಫಾರಸು

ನೂತನ ಹಜ್ ನೀತಿ ಕುರಿತು ಅಧ್ಯಯನ ಮಾಡಿದ ಮಾಜಿ ಕೇಂದ್ರ ಕಾರ್ಯದರ್ಶಿ ಅಫ್ಜಲ್ ಅಮಾನುಲ್ಲಾ ನೇತೃತ್ವದ ಉನ್ನತ ಮಟ್ಟದ ಸಮಿತಿ ಶನಿವಾರ ಕರಡು ಪತ್ರವನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಮುಖ್ತಾರ್ ಅಬ್ಬಾಸ್ ನಖ್ವಿ ಅವರಿಗೆ ಸಲ್ಲಿಸಿತು.

2018-22 ರವರೆಗೆ ಸಂಬಂಧಿಸಿದ ಈ ನೂತನ ನೀತಿಯ ಕರಡು ಪತ್ರದಲ್ಲಿ ಹಜ್ ಯಾತ್ರಿಕರಿಗೆ ನೀಡುವ ರಿಯಾಯಿಯಿಗಳನ್ನು ಕ್ರಮೇಣ ರದ್ದುಗೊಳಿಸುವುದು, ಪುರುಷರು ಜೊತೆಗಿಲ್ಲದೆ ಯಾತ್ರೆ ಕೈಗೊಳ್ಳುವ ಮಹಿಳೆಯರಿಗೆ ಅವಕಾಶ ಕಲ್ಪಿಸುವುದು, ಪ್ರಯಾಣ ವೆಚ್ಚ ಕಡಿತಗೊಳಿಸಲು ವಿಮಾನಯಾನದ ಬದಲು ನೌಕಾಯಾನವನ್ನು ಪ್ರೋತ್ಸಾಹಿಸುವುದು ಇದರಲ್ಲಿರುವ ಪ್ರಮುಖ ಅಂಶಗಳು.

[ಇದನ್ನೂ ಓದಿ: ಮಿಸ್ಟರ್ ದಲಿತ್ ಚಳುವಳಿಯ ಹಿಂದಿನ ಅಸಲಿ ಬಣ್ಣ ಬಯಲು!]

2022 ರ ವೇಳೆಗೆ ಹಜ್ ಸಬ್ಸಿಡಿಗಳನ್ನು ರದ್ದುಗೊಳಿಸಬೇಕು, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು 2012 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ತೀರ್ಪಿಗೆ ಅನುಗುಣವಾಗಿ ತೀರ್ಮಾನ ತೆಗೆದುಕೊಂಡಿರುವುದಾಗಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದರು. ಆದರೆ ಬಡವರ ಮೇಲೆ ಇದರ ಹೊರೆ ಬೀಳದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಸಬ್ಸಿಡಿ ರದ್ದು ಕಾರಣದಿಂದ ಉಳಿತಾಯವಾಗುವ ಹಣವನ್ನು ಮುಸ್ಲಿಮರ ಶಿಕ್ಷಣಕ್ಕೆ ವೆಚ್ಚ ಮಾಡುತ್ತೇವೆ ಎಂದು ಅವರು ಹೇಳಿದರು. ಸದ್ಯ 21 ನಗರಗಳ ಮೂಲಕ ಹಜ್ ಯಾತ್ರೆಗೆ ಹೋಗಬಹುದಾಗಿದ್ದು, ಈ ಸೌಲಭ್ಯವನ್ನು ಇನ್ನು ಮುಂದೆ 9 ನಗರಗಳಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಮುಂಬೈ, ಬೆಂಗಳೂರು, ಅಹಮದಾಬಾದ್, ಕೋಲ್ಕತಾ, ಲಖ್ನೌ, ದೆಹಲಿ, ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಕೊಚಿನ್ ಮೂಲಕ ಮಾತ್ರ ಯಾತ್ರೆಗೆ ವಿಮಾನ ಪ್ರಯಾಣ ಸೌಲಭ್ಯ ಲಭ್ಯವಿರುತ್ತದೆ. ಸೌದಿಗೆ ವಿಮಾನಗಳ ಮೂಲಕ ಹೋಗುತ್ತಿರುವುದರಿಂದ ಖರ್ಚು ಹೆಚ್ಚಾಗುತ್ತಿದೆ, ಹೀಗಾಗಿ ನೌಕೆಗಳ ಮೂಲಕ ಕಳುಹಿಸುವ ಆಲೋಚನೆ ಇದೆ ಎಂದು ಅವರು ಹೇಳಿದರು.

ಮಹಿಳಾ ಯಾತ್ರಿಕರಿಗೆ ಅನುಕೂಲ:

ಇದುವರೆಗೂ ಮಹಿಳೆಯರಿಗೆ ಪುರುಷರು ಜೊತೆಗಿಲ್ಲದಿದ್ದರೆ ಯಾತ್ರೆಯ ಅವಕಾಶ ಸಿಗುತ್ತಿರಲಿಲ್ಲ. ಇನ್ನು ಮುಂದೆ 45 ವರ್ಷ ದಾಟಿದ ಮಹಿಳೆಯರು ಕನಿಷ್ಟ ನಾಲ್ವರು ಸೇರಿ ಪುರುಷರು ಜೊತೆಗಿಲ್ಲದಿದ್ದರೂ ಯಾತ್ರೆ ಕೈಗೊಳ್ಳುವ ಅವಕಾಶ ಕಲ್ಪಿಸಲಾಗಿದೆ. ರಕ್ತ ಸಂಬಂಧಿಕರ ಜೊತೆ ಯಾತ್ರೆ ಕೈಗೊಳ್ಳುವ 45 ವರ್ಷದೊಳಗಿನ ಮಹಿಳೆಯರ ಕೋಟಾವನ್ನು 200 ರಿಂದ 500 ಕ್ಕೆ ಹೆಚ್ಚಳ ಮಾಡಲಾಗಿದೆ. ಯಾತ್ರಿಕರ ಕೋಟಾವನ್ನು ಭಾರತೀಯ ಹಜ್ ಸಮಿತಿ ಮತ್ತು ಖಾಸಗಿ ಟೂರ್ ಆಪರೇಟರ್ಸ್ ನಡುವೆ 70:30 ಅನುಪಾತದಲ್ಲಿ ಹಂಚಲು ತೀರ್ಮಾನಿಸಲಾಗಿದೆ. ಈ ಕುರಿತು ಎಲ್ಲರ ಅಭಿಪ್ರಾಯಗಳನ್ನು ಸ್ವೀಕರಿಸಿದ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

Get Latest updates on WhatsApp. Send ‘Add Me’ to 8550851559

Loading...