ಹತನಾದ ಉಗ್ರ ದುಜಾನಾ ಮತ್ತು ಸೇನಾಧಿಕಾರಿ ನಡುವಿನ ಸಂಭಾಷಣೆ – News Mirchi

ಹತನಾದ ಉಗ್ರ ದುಜಾನಾ ಮತ್ತು ಸೇನಾಧಿಕಾರಿ ನಡುವಿನ ಸಂಭಾಷಣೆ

ಅಬು ದುಜಾನಾ ಎಂಬ ಲಷ್ಕರ್ ಉಗ್ರ ಇತ್ತೀಚೆಗೆ ಕಾಶ್ಮೀರದಲ್ಲಿ ಭದ್ರತಾಪಡೆಗಳೂ ನಡೆಸಿದ ಎನ್ಕೌಂಟರ್ ನಲ್ಲಿ ಸತ್ತವನು. ಪತ್ನಿಯನ್ನು ನೋಡಲು ಕಾಶ್ಮೀರಕ್ಕೆ ಬಂದ ದುಜಾನಾನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದವು. ಆದರೆ ಎನ್ಕೌಂಟರ್ ನಡೆಯುವ ಮುನ್ನ ದುಜಾನಾ ಮತ್ತು ಸೇನಾಧಿಕಾರಿಯೊಂದಿಗೆ ಸಂಭಾಷಣೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಆಂಗ್ಲ ಸುದ್ದಿ ಸಂಸ್ಥೆಯೊಂದು ಬಹಿರಂಗಪಡಿಸಿದೆ. ಆ ವಿವರಗಳು ಹೀಗಿವೆ…

ಪತ್ನಿಯನ್ನು ನೋಡಲು ದುಜಾನಾ ಮಂಗಳವಾರ ಪುಲ್ವಾಮಾ ಜಿಲ್ಲೆಯ ತನ್ನ ಮನೆಗೆ ಬಂದಿದ್ದ. ಆತನ ಬರುವಿಕೆಯನ್ನು ಮೊದಲೇ ತಿಳಿದಿದ್ದ ಆರ್ಮಿ ಅಧಿಕಾರಿಗಳು ಭಾರೀ ಸಂಖ್ಯೆಯ ಯೋಧರೊಂದಿಗೆ ಆತನ ಮನೆಯನ್ನು ಸುತ್ತುವರೆದರು. ಒಬ್ಬ ಆರ್ಮಿ ಅಧಿಕಾರಿ ಅಲ್ಲಿಯೇ ಇದ್ದ ಸ್ಥಳೀಯನೊಬ್ಬನಿಂದ ಮನೆಯಲ್ಲಿದ್ದ ದುಜಾನಾನಿಗೆ ಫೋನ್ ಮಾಡಿಸಿದರು. ಸ್ಥಳೀಯನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದ ಸಮಯದಲ್ಲಿ ದುಜಾನಾನಲ್ಲಿ ಯಾವುದೇ ಆತಂಕ ಕಾಣಿಸಿರಲಿಲ್ಲ. ಸ್ಥಳೀಯನೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಫೋನ್ ಕೈಗೆ ತೆಗೆದುಕೊಂಡ ಆರ್ಮಿ ಅಧಿಕಾರಿ ದುಜಾನಾನೊಂದಿಗೆ ಮಾತನಾಡಿದರು.

ಎನ್ಕೌಂಟರಿನಲ್ಲಿ ಪ್ರಮುಖ ಲಷ್ಕರ್ ಉಗ್ರನ ಹತ್ಯೆ

ಉಗ್ರ: ಹೇಗಿದ್ದೀರಿ?
ಅಧಿಕಾರಿ: ದುಜಾನಾ ನೀನು ಮಾಡುತ್ತಿರುವುದು ಸರಿಯಲ್ಲ, ಒಬ್ಬ ಯುವತಿಯನ್ನು ಮದುವೆ ಮಾಡಿಕೊಂಡು ಇಂತಹ ಕೆಲಸ ಮಾಡುವುದು ನಿನಗೂ ಮತ್ತು ಆಕೆಗೂ ಇಬ್ಬರಿಗೂ ಒಳ್ಳೆಯದಲ್ಲ, ಇವೆಲ್ಲಾ ಬಿಟ್ಟು ಶರಣಾಗು.

ಉಗ್ರ: ಜೀವ ಹೋದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರೂ ಹೆಚ್ಚು ಕಾಲ ಬದುಕುವುದಿಲ್ಲ. ಈಗ ನಾನು, ನಂತರ ನೀವು… ಅವೆಲ್ಲಾ ಬಿಟ್ಟೇ ಈ ಪವಿತ್ರ ಯುದ್ಧಕ್ಕೆ ಬಂದಿದ್ದೀನಿ. ನನ್ನನ್ನು ಹಿಡಿದಿದ್ದಕ್ಕೆ ನಿಮಗೆ ಶುಭಾಶಯಗಳು. ಇನ್ನು ನೀವೇನು ಮಾಡುತ್ತೀರೋ ಮಾಡಿಕೊಳ್ಳಿ. ನಾನು ಮಾತ್ರ ಶರಣಾಗುವುದಿಲ್ಲ, ಅಲ್ಲಾ ಬಯಸಿದ್ದೇ ಆಗುತ್ತದೆ.

ಅಧಿಕಾರಿ: ದೇವರು ಎಲ್ಲರಿಗೂ ಒಬ್ಬರೇ. ಭಾರತೀಯ ಸೇನೆ ಸದಾ ಉಗ್ರರಲ್ಲಿ ಬದಲಾವಣೆಯನ್ನು ಬಯಸುತ್ತದೆ. ಅವರನ್ನು ಕೊಲ್ಲಬೇಕೆಂದು ಬಯಸುವುದಿಲ್ಲ. ನಿಮ್ಮ ತಂದೆತಾಯಿಗಳ ಕುರಿತು ಒಮ್ಮೆ ಯೋಚಿಸು. ಅವರೊಂದಿಗೆ ಬದುಕಬೇಕೆಂದು ನಿನಗೆ ಆಸೆ ಇಲ್ವಾ? ಶರಣಾಗು…

ಉಗ್ರ: ನಾನು ಅವರನ್ನೆಲ್ಲಾ ಬಿಟ್ಟು ಈ ಕೆಲಸಕ್ಕೆ ಬಂದಾಗಲೇ ಅವರು ಸತ್ತಂತೆ ಲೆಕ್ಕ. ಅವರ ಕುರಿತು ನನಗೆ ಚಿಂತೆ ಇಲ್ಲ ಎಂದು ಫೋನ್ ಕಟ್ ಮಾಡಿದ.

ಮತ್ತೊಮ್ಮೆ ಶರಣಾಗುವಂತೆ ಹೇಳಬೇಕೆಂದು ಅಧಿಕಾರಿ ಸ್ಥಳೀಯನಿಂದ ಫೋನ್ ಮಾಡಿಸಲು ಪ್ರಯತ್ನಿಸಿದರು. ಆದರೆ ಈ ಬಾರಿ ದುಜಾನಾ ಫೋನ್ ಗೆ ಉತ್ತರಿಸಲಿಲ್ಲ. ಆ ನಂತರ ಮನೆಯೊಳಗಿಂದ ಭದ್ರತಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದೆ. ಹೀಗಾಗಿ ಪ್ರತಿದಾಳಿ ನಡೆಸಿದ ಭದ್ರತಾ ಪಡೆಗಳು ದುಜಾನಾ ಮತ್ತು ಆತನ ಸಹಚರನನ್ನು ಕೊಂದರು.

ಸೇನೆಯ ಗುರಿ ಉಗ್ರರ ನಾಯಕರು, ಒಬ್ಬೊಬ್ಬರನ್ನೇ ಬಲಿ ಪಡೆಯುತ್ತಿರುವ ಯೋಧರು

Loading...