ರೋಹಿಣಿ ಸಿಂಧೂರಿ ವರ್ಗಾವಣೆಗೆ ಚುನಾವಣಾ ಆಯೋಗ ತಡೆ

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ 6 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ನಿನ್ನೆ ಹೊರಡಿಸಿದ್ದ ಆದೇಶಕ್ಕೆ ಚುನಾವಣಾ ಆಯೋಗ ತಡೆ ನೀಡಿದೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ನಡೆಯುವುದರಿಂದ, ಮತದಾರರ ಪಟ್ಟಿ ಪರಿಷ್ಕರಣೆ ಮುಗಿಯವವರೆಗೂ ವರ್ಗಾವಣೆ ಮಾಡದಂತೆ ಚುನಾವಣಾ ಆಯೋಗ ಸೂಚಿಸಿದೆ. ಮತದಾರರ ಸೇರ್ಪಡೆಯ ಕೊನೆಯ ದಿನದವರೆಗೂ ಯಾವುದೇ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಬಾರದು ಎಂದು ಈ ಹಿಂದೆಯೇ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು ಎನ್ನಲಾಗಿದೆ.

ಈ ಕುರಿತು ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಚುನಾವಣಾ ಆಯೋಗ ಪತ್ರ ಬರೆದು ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ, ವರ್ಗಾವಣೆ ಮಾಡಲೇಬೇಕಾದ ಸಂದರ್ಭಗಳಿದ್ದರೆ ತಮಗೆ ಮುಂಚಿತವಾಗಿ ಮಾಹಿತಿ ನೀಡಲು ಸೂಚಿಸಿದೆ.

ಶ್ರವಣಬೆಳಗೊಳದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಿದ್ದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಮಹಾಮಸ್ತಕಾಭಿಷೇಕಕ್ಕೆ ಬಿಡುಗಡೆಯಾಗಿರುವ ಕೋಟ್ಯಂತರ ರೂಪಾಯಿ ಹಣದಲ್ಲಿ ಅಕ್ರಮ ನಡೆಯದಂತೆ ರೋಹಿಣಿ ತಡೆದಿದ್ದರು. ಅವರ ದಕ್ಷತೆಯೇ ಸ್ಥಳೀಯ ಕಾಂಗ್ರೆಸ್ ಮುಖಂಡರ ವಿರೋಧಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ಅಧಿಕಾರಿಗಳ ವರ್ಗಾವಣೆಗೆ ಚುನಾವಣಾ ಆಯೋಗ ತಡೆ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಳಿತಾತ್ಮಕ ಕಾರಣಗಳಿಂದ ಅವರ ವರ್ಗಾವಣೆ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತಿ ಇನ್ನೂ ಜಾರಿಯಾಗಿಲ್ಲ, ಹೀಗಿದ್ದಾಗ ಚುನಾವಣಾ ಆಯೋಗ ವರ್ಗಾವಣೆಯನ್ನು ತಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

Get Latest updates on WhatsApp. Send ‘Subscribe’ to 8550851559