ಇಎಸ್‌ಐ ಕಾರ್ಮಿಕರ ಮಕ್ಕಳಿಗೆ ವೈದ್ಯಕೀಯ ಶಿಕ್ಷಣದಲ್ಲಿ ಮೀಸಲಾತಿ

ನವದೆಹಲಿ: ಇಎಸ್‌ಐಸಿ ವ್ಯಾಪ್ತಿಯ ಕಾರ್ಮಿಕರ ಮಕ್ಕಳಿಗೆ ವೈದ್ಯಕೀಯ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲು ಕಾರ್ಮಿಕರ ರಾಜ್ಯ ವಿಮಾ ನಿಗಮ(ಇಎಸ್ಐಸಿ) ಶುಕ್ರವಾರ ತೀರ್ಮಾನಿಸಿದೆ. ಅಷ್ಟೇ ಅಲ್ಲದೆ ಅವರ ಶುಲ್ಕದಲ್ಲಿ ಸಬ್ಸಿಡಿ ಕೂಡಾ ನೀಡುವುದಾಗಿ ಹೇಳಿದೆ. ಇದಕ್ಕಾಗಿ 2016-17 ಶೈಕ್ಷಣಿಕ ವರ್ಷದಲ್ಲಿ ಇಎಸ್ಐಸಿ/ಇಎಸ್ಐ ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 700 ಸೀಟುಗಳು ಮೀಸಲಿರಿಸಿರುವುದಾಗಿ ಹೇಳಿದೆ. ಕಡಿಮೆ ವೇತನ ಪಡೆಯುತ್ತಿರುವ ಕಾರ್ಮಿಕರ ಮಕ್ಕಳಿಗಳನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ಈ ತೀರ್ಮಾನ ಐತಿಹಾಸಿಕ ಎಂದು ಇಎಸ್ಐಸಿ ಅಭಿಪ್ರಾಯ ಪಟ್ಟಿದೆ.

ಆದರೆ ನೀಟ್ ಪರೀಕ್ಷೆಗಳಲ್ಲಿ ಪ್ರತಿಭೆಯ ಆಧಾರದ ಮೇಲೆ ಇಎಸ್ಐಸಿ ವೈದ್ಯಕೀಯ ಕಾಲೇಜುಗಳಲ್ಲಿ ‘ಇನ್ಶ್ಯೂರ್ಡ್ ಪರ್ಸನ್ಸ್ ಕೋಟಾ’ ಅಡಿ (ಹಿಂದಿನ ಇಎಸ್ಐಸಿ ಮ್ಯಾನೇಜ್ಮೆಂಟ್ ಕೋಟ್) ಯಲ್ಲಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸಂಸ್ಥೆ ವಿವರಿಸಿದೆ. ಈ ಕೋಟಾವನ್ನು ಆಲ್ ಇಂಡಿಯಾ ಆಧಾರದ ಮೇಲೆ ತೆಗೆದುಕೊಂಡು ಮೀಸಲು ಕಲ್ಪಿಸಲಾಗುತ್ತದೆ. ತಿಂಗಳಿಗೆ ರೂ. 15 ಸಾವಿರದ ಒಳಗೆ ವೇತನ ಪಡೆಯುವ ಕಾರ್ಮಿಕರ ಮಕ್ಕಳ ಪ್ರವೇಶಗಳಿಗೆ ಪ್ರಾಮುಖ್ಯತೆ ಇರುತ್ತದೆ. ಒಟ್ಟು 700 ಸೀಟುಗಳಲ್ಲಿ 267(38.14%) ಸೀಟುಗಳು ಈ ಕೋಟಾದಡಿ ಬರುತ್ತವೆ ಎಂದು ಇಎಸ್ಐಸಿ ಪ್ರಕಟಿಸಿದೆ.