ಅಯೋಧ್ಯೆ ವಿವಾದ: ಕೆಲವೊಮ್ಮೆ ಸಮಸ್ಯೆಗೆ ಪರಿಹಾರ ಕಷ್ಟ, ಯುವಕರು ಮತ್ತು ಧಾರ್ಮಿಕ ಮುಖಂಡರು ಮುಂದೆ ಬಂದರೆ ಸಾಧ್ಯ – News Mirchi

ಅಯೋಧ್ಯೆ ವಿವಾದ: ಕೆಲವೊಮ್ಮೆ ಸಮಸ್ಯೆಗೆ ಪರಿಹಾರ ಕಷ್ಟ, ಯುವಕರು ಮತ್ತು ಧಾರ್ಮಿಕ ಮುಖಂಡರು ಮುಂದೆ ಬಂದರೆ ಸಾಧ್ಯ

ಬಾಬ್ರಿ ಮಸೀದಿ ಮತ್ತು ರಾಮಜನ್ಮಭೂಮಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಸ್ನೇಹ ಮತ್ತು ಸೌಹಾರ್ಧದಿಂದ ಒಗ್ಗೂಡಿ ಮುಂದೆ ಬರಬೇಕು ಎಂದು ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಸಲಹೆ ನೀಡಿದ್ದಾರೆ. ವಿವಾದ ಬಗೆಹರಿಸಲು ತಾವು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಈ ಇತ್ತೀಚೆಗೆ ಪ್ರಕಟಿಸಿದ್ದ ಶ್ರೀ ಶ್ರೀ, ಇದಕ್ಕೆ ಸಂಬಂಧಿಸಿದಂತೆ ಕೆಲವು ಪಾಲುದಾರರೊಂದಿಗೆ ಮಾತುಕತೆಯೂ ನಡೆಸಿದ್ದಾರೆ.

ಕೆಲವು ಸಮಸ್ಯೆಗಳಿಗೆ ಪರಿಹಾರ ಕೆಲವೊಮ್ಮ ಸಾಧ್ಯವೇ ಇಲ್ಲವೆಂದು ಅನಿಸುತ್ತದೆಯಾದರೂ, ಎರಡೂ ಸಮುದಾಯದ ಯುವಕರು ಮತ್ತು ಮುಖಂಡರು ಇದನ್ನು ಸಾಧ್ಯವಾಗಿಸಬಲ್ಲರು ಎಂದು ಎಂದು ಹೇಳಿದರು. ಬಹುತೇಕ ಮುಸ್ಲಿಮರು ವಿವಾದಿತ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದು ಅವರು ಹೇಳಿದರು.

ಇನ್ನು ವಿವಾದದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಕುರಿತು ಪ್ರಶ್ನಿಸಿದಾಗ ಉತ್ತರಿಸಿದ ಶ್ರೀ ಶ್ರೀ, ನ್ಯಾಯಾಲಯದ ಮೂಲಕ ಸದ್ಯಕ್ಕೆ ಈ ವಿವಾದಕ್ಕೆ ಪರಿಹಾರ ಕಂಡುಕೊಂಡರೂ 100 -200 ವರ್ಷಗಳ ನಂತರ ವಿವಾದ ಮತ್ತೆ ಸೃಷ್ಟಿಯಾಗಬಹುದು. ಶಾಶ್ವತ ಶಾಂತಿಯುತ ಪರಿಹಾರಕ್ಕೆ ಎರಡೂ ಸಮುದಾಯದ ಧಾರ್ಮಿಕ ಮುಖಂಡರು ಒಂದು ಪರಿಹಾರ ಕಂಡುಕೊಳ್ಳುವುದು ಉತ್ತಮ ಎಂದು ಅಭಿಪ್ರಾಯ ಪಟ್ಟರು. ಇದಕ್ಕೂ ಮುನ್ನಾ ದಿನ ಪ್ರತಿಕ್ರಿಯಿಸಿದ್ದ ಶ್ರೀ ಶ್ರೀ, ಜನರು ಈ ವಿವಾದವನ್ನು ಬಗೆಹರಿಸಲು ಬಯಸಿದ್ದರೂ, ಅದು ಅಷ್ಟು ಸುಲಭವಿಲ್ಲ, ಎಲ್ಲರೊಂದಿಗೆ ಮಾತನಾಡುತ್ತೇನೆ, ಈ ಬಗ್ಗೆ ಈಗಲೇ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ರಾಮಜನ್ಮಭೂಮಿ ದೇಗುಲ ಮಂಡಳಿಯ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಮತ್ತು ದಿಗಂಬರ ಅಖಾಡಾದ ಮಹಂತ ಸುರೇಶ್ ದಾಸ್ ಮುಂತಾದವರನ್ನು ಶ್ರೀ ಶ್ರೀ ರವಿಶಂಕರ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಆದರೆ ರವಿಶಂಕರ್ ಅವರ ಪ್ರಯತ್ನಕ್ಕೆ ಮಾಜಿ ಬಿಜೆಪಿ ಸಂಸದ ರಾಮ್ ವಿಲಾಸ್ ವೇದಾಂತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಹೊರಗೆ ವಿವಾದಿತ ಭೂಮಿಯ ಪಾಲುದಾರರೊಂದಿಗೆ ಸಂಧಾನಕ್ಕೆ ಯತ್ನಿಸುತ್ತಿರುವ ರವಿಶಂಕರ್ ಯಾರು ಎಂದು ಪ್ರಶ್ನಿಸಿದ್ದಾರೆ. ರವಿಶಂಕರ್ ಸಾಕಷ್ಟು ಸಂಪತ್ತು ಹೊಂದಿದ್ದು, ತನಿಖೆಯಿಂದ ಪಾರಾಗಲು ರಾಮಜನ್ಮಭೂಮಿ ವಿವಾದದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

12 ವರ್ಷಗಳ ಹಿಂದೆಯೇ ಶ್ರೀ ಶ್ರೀ ರವಿಶಂಕರ್ ಇಂತಹದ್ದೊಂದು ಯತ್ನವನ್ನು ಮಾಡಿದ್ದರು, ಆಗ ವಿವಾದಿತ ಸ್ಥಳವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂಬ ನಿಲುವು ಪ್ರದರ್ಶಿಸಿದ್ದರು ಎಂದು ಆಲ್ ಇಂಡಿಯಾ ಮುಸ್ಲಿಂ ಲಾ ಬೋರ್ಡ್ ಹೇಳಿದ್ದರೆ, ಪುರಾತತ್ವ ಸಾಕ್ಷಿಗಳು ಹಿಂದೂಗಳ ಪರವಾಗಿರುವುದರಿಂದ, ಮಾತುಕತೆಯ ಅವಶ್ಯಕತೆಯಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.

Get Latest updates on WhatsApp. Send ‘Add Me’ to 8550851559

Loading...