ಕೇಂದ್ರ ಬಡ್ಜೆಟ್, ಒಂದಷ್ಟು ಕುತೂಹಲಕಾರಿ ವಿಷಯಗಳು – News Mirchi

ಕೇಂದ್ರ ಬಡ್ಜೆಟ್, ಒಂದಷ್ಟು ಕುತೂಹಲಕಾರಿ ವಿಷಯಗಳು

ಕೇಂದ್ರ ಆರ್ಥಿಕ ಸಚಿವ ಅರುಣ್ ಜೇಟ್ಲಿ ಬುಧವಾರ(ಫೆಬ್ರವರಿ 1) ರಂದು ಬಡ್ಜೆಟ್ ಮಂಡಿಸಲಿದ್ದಾರೆ. ಪ್ರಧಾನಿ ಮೋದಿ ನೋಟು ರದ್ದು ಮಾಡುವಂತಹ ಐತಿಹಾಸಿಕ ತೀರ್ಮಾನ ತೆಗೆದುಕೊಂಡ ನಂತರ ಅರುಣ್ ಜೇಟ್ಲಿ ಮಂಡಿಸುತ್ತಿರುವ ಮೊದಲ ಬಡ್ಜೆಟ್ ಇದು. ಹೀಗಾಗಿ ನೋಟು ರದ್ದು ಮಾಡಿ ಶಾಕ್ ನೀಡಿದ್ದ ಕೇಂದ್ರ ಸರ್ಕಾರ, ಜನಸಾಮಾನ್ಯನನ್ನು ತೃಪ್ತಿಗೊಳಿಸುವ ನಿಟ್ಟಿನಲ್ಲಿ ಈ ಬಾರಿಯ ಕೇಂದ್ರ ಬಡ್ಜೆಟ್ ಹೇಗೆ ನೀಡಲಿದೆ ಎಂಬ ಕುತೂಹಲವಿದ್ದೇ ಇದೆ.

ಕೇಂದ್ರ ಬಡ್ಜೆಟ್ ಕುರಿತಾದ ಒಂದಷ್ಟು ಉಪಯುಕ್ತ ಮಾಹಿತಿ…

ಸ್ವತಂತ್ರ ಭಾರತದಲ್ಲಿ ಮೊಟ್ಟಮೊದಲ ಬಡ್ಜೆಟ್ ಮಂಡಿಸಿದ್ದು 1947 ರ ನವೆಂಬರ್ ನಲ್ಲಿ‌ ದೇಶದ ಮೊದಲ ಹಣಕಾಸು ಸಚಿವರಾಗಿದ್ದ ಆರ್.ಕೆ.ಶಣ್ಮುಗಂ ಚೆಟ್ಟಿ ಅವರು. ಆ ಬಡ್ಜೆಟ್ ಏಳೂವರೆ ತಿಂಗಳ ಅವಧಿಯದ್ದಾಗಿತ್ತು. ಇದೇ ಶಣ್ಮುಗಂ ಚೆಟ್ಟಿಯವರೇ 1948-49 ರ ಮಧ್ಯಂತರ ಬಡ್ಜೆಟ್ ಅನ್ನೂ ಮಂಡಿಸಿದ್ದರು.

ಚೆಟ್ಟಿ ನಂತರ ಬಂದ ಜಾನ್ ಮಥಾಯ್ ಅವರು 1949-50 ರ ಬಡ್ಜೆಟ್ ಮಂಡಿಸಿದ್ದರು. ಈ ಬಡ್ಜೆಟ್ ವಿಶೇಷತೆಯೆಂದರೆ ಜಾನ್ ಮಥಾಯ್ ಅವರು ಬಡ್ಜೆಟ್ ಓದಿರಲಿಲ್ಲ, ಬದಲಿಗೆ ಸದಸ್ಯರಿಗೆಲ್ಲಾ ಬಡ್ಜೆಟ್ ವಿವರವುಳ್ಳ ಕಾಗದಪತ್ರ ಗಳನ್ನು ಓದಿಕೊಳ್ಳುವಂತೆ ಹೇಳಿದ್ದರು.

ಅತಿ ಹೆಚ್ಚು ಬಡ್ಜೆಟ್ ಮಂಡಿಸಿದ ಕೀರ್ತಿ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವರಿಗೆ ಸಲ್ಲುತ್ತದೆ. ಅವರು 10 ಬಾರಿ ಕೇಂದ್ರ ಬಡ್ಜೆಟ್ ಮಂಡಿಸಿದ್ದರು. ಅವುಗಳಲ್ಲಿ ಎರಡು ಬಾರಿ ತಮ್ಮ ಹುಟ್ಟಿದ ದಿನದಂದೇ ಮಂಡಿಸಿದ್ದರು.

ಇಬ್ಬರು ರಾಷ್ಟ್ರಪತಿಗಳು ಹಿಂದೆ ಹಣಕಾಸು ಸಚಿವರಾಗಿದ್ದಾಗ ಬಡ್ಜೆಟ್ ಮಂಡಿಸಿದ್ದರು. ಅವರಲ್ಲಿ ಒಬ್ಬರು ಆರ್.ವೆಂಕಟರಾಮನ್, ಮತ್ತೊಬ್ಬರು ಈಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ.

ಇದುವರೆಗೂ ಭಾರತದಲ್ಲಿ ಕೇವಲ ಒಬ್ಬ ಮಹಿಳೆ ಬಡ್ಜೆಟ್ ಮಂಡಿಸಿದ್ದಾರೆ. ಅವರೇ ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿ. 1970-71 ರಲ್ಲಿ ಮೊರಾರ್ಜಿ ದೇಸಾಯಿಯವರ ರಾಜೀನಾಮೆ ನಂತರ ಇಂದಿರಾ ಬಡ್ಜೆಟ್ ಮಂಡಿಸಿದ್ದರು.

ದೇಶದಲ್ಲಿ ಇದುವರೆಗೆ ಮೂವರು ಪ್ರಧಾನಿಗಳು ಬಡ್ಜೆಟ್ ಮಂಡಿಸಿದ್ದಾರೆ. ಮೂವರೂ ಒಂದೇ ಕುಟುಂಬಕ್ಕೆ ಸೇರಿರುವುದು ವಿಶೇಷ‌. ಜವಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಪ್ರಧಾನಮಂತ್ರಿ ಆಗಿದ್ದಾಗಲೇ ಬಡ್ಜೆಟ್ ಮಂಡಿಸಿದ್ದರು.

ಬ್ರಿಟೀಷರ ಕಾಲದಿಂದ ಮುಂದುವರೆದುಕೊಂಡು ಬಂದಿದ್ದ ಬಡ್ಜೆಟ್ ವೇಳೆಯನ್ನು ವಾಜಪೇಯಿ ಕಾಲದಲ್ಲಿ ಬದಲಿಸಲಾಯಿತು. ಅಲ್ಲಿಯವರೆಗೂ ಸಂಜೆ 5 ಗಂಟೆಗೆ ಮಂಡಿಸುತ್ತಿದ್ದ ಬಡ್ಜೆಟ್ ಅನ್ನು ವಾಜಪೇಯಿ ಪ್ರಧಾನಿಯಾಗಿದ್ದಾಗ ಹಣಕಾಸು ಸಚಿವರಾಗಿದ್ದ ಯಶವಂತ ಸಿನ್ಹಾ ರವರು ಬೆಳಗ್ಗೆ 11 ಗಂಟೆಗೆ ಮಂಡಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಒಂದು ತಿಂಗಳು ಮೊದಲೇ ಅಂದರೆ ಫೆಬ್ರವರಿ 1 ರಂದು ಬಡ್ಜೆಟ್ ಮಂಡಿಸುತ್ತಿದ್ದಾರೆ.

ಸಿಹಿ ತಿಂಡಿ ಹಲ್ವಾ ತಯಾರಿಸುವುದರೊಂದಿಗೆ ಬಡ್ಜೆಟ್ ದಾಖಲೆಗಳ ಮುದ್ರಣ ಆರಂಭವಾಗುತ್ತದೆ. ಆ ಸಮಯದಿಂದ ಹಣಕಾಸು ಸಚಿವಾಲಯದ ಹಲವು ಅಧಿಕಾರಿಗಳನ್ನು ಹೊರಗೆ ಬಾರದಂತೆ ನೋಡಿಕೊಳ್ಳಲಾಗುತ್ತದೆ. ಹಣಕಾಸು ಸಚಿವರು ಬಡ್ಜೆಟ್ ಓದಿ ಮುಗಿಸುವವರೆಗೂ ಅಧಿಕಾರಿಗಳು ತಮ್ಮ ಮನೆಯವರೊಂದಿಗೂ ಮಾತನಾಡಲು ಅವಕಾಶವಿರುವುದಿಲ್ಲ.

Loading...

Leave a Reply

Your email address will not be published.