ಮೈಸೂರಿನಲ್ಲಿ ಗಾನಪಯಣಕ್ಕೆ ವಿದಾಯ ಹೇಳಲಿರುವ ಗಾನಕೋಗಿಲೆ ಎಸ್.ಜಾನಕಿ – News Mirchi

ಮೈಸೂರಿನಲ್ಲಿ ಗಾನಪಯಣಕ್ಕೆ ವಿದಾಯ ಹೇಳಲಿರುವ ಗಾನಕೋಗಿಲೆ ಎಸ್.ಜಾನಕಿ

ಮೈಸೂರು,ಅ.22: ಸುಮಧುರ ಕಂಠದ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿಯವರು 65 ವರ್ಷಗಳ ಬಳಿಕ ಮಲ್ಲಿಗೆ ನಗರಿ ಮೈಸೂರಿನಲ್ಲಿ ತಮ್ಮ ಗಾನ ಪಯಣಕ್ಕೆ ವಿದಾಯ ಹೇಳಲಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಅಕ್ಟೋಬರ್ 28 ರಂದು ಪ್ರಖ್ಯಾತ ಹಿನ್ನೆಲೆ ಗಾಯಕಿ ಎಸ್ ಜಾನಕಿ ಅವರು ತಮ್ಮ ಜೀವನದ ಕೊನೆಯ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ ಸುದೀರ್ಘ ಗಾನ ಯಾನವನ್ನು ಮುಕ್ತಾಯ ಮಾಡಲಿದ್ದಾರೆ. ಕಳೆದ ವರ್ಷವಷ್ಟೇ ತಮ್ಮ ಸಿನಿಮಾ ಗಾಯನ ಜೀವನದಿಂದ ನಿವೃತ್ತಿ ಘೋಷಿಸಿದ್ದರು. ನನಗೀಗ ವಯಸ್ಸಾಗಿದೆ, ಅದರಲ್ಲೂ ಈ ವಯಸ್ಸಿನಲ್ಲಿ ಹಾಡುವುದನ್ನು ನಿಲ್ಲಿಸಿದರೆ ಉತ್ತಮ ಎಂದೆನಿಸಿದೆ. ಅದಕ್ಕಾಗಿ, ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮವೇ ನನ್ನ ಕೊನೆಯ ಬಹಿರಂಗ ಗಾಯನ ಕಾರ್ಯಕ್ರಮ ಎಂದು ಜಾನಕಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಎಸ್.ಜಾನಕಿ ನೀಡಿದ ಮೊಟ್ಟ ಮೊದಲ ಸಂಗೀತ ಸಂಜೆ ಕಾರ್ಯಕ್ರಮ ಮೈಸೂರಿನಲ್ಲೇ ನಡೆದಿತ್ತು. 1952ರಲ್ಲಿ ಅಂದಿನ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರಿಂದ ಆಯೋಜಿಸಲ್ಪಟ್ಟಿದ್ದ ಈ ಕಾರ್ಯಕ್ರಮದಲ್ಲಿ ಜಾನಕಿ ಅವರು ಪಿ.ಬಿ. ಶ್ರೀನಿವಾಸ್ ಜತೆ ಹಾಡಿದ್ದರು. ಇದೀಗ,ಮೈಸೂರಿನಲ್ಲೇ ಅವರ ಕೊನೆಯ ಕಾರ್ಯಕ್ರಮವೂ ನಡೆಯುತ್ತಿರುವುದು ವಿಶೇಷವಾಗಿದೆ.

Get Latest updates on WhatsApp. Send ‘Add Me’ to 8550851559

Loading...