ಸಾಲ ಮನ್ನಾ ಬೇಡಿಕೆ ಇತ್ತೀಚೆಗೆ ಒಂದು ಫ್ಯಾಷನ್ ಆಗಿದೆ: ವೆಂಕಯ್ಯನಾಯ್ಡು – News Mirchi

ಸಾಲ ಮನ್ನಾ ಬೇಡಿಕೆ ಇತ್ತೀಚೆಗೆ ಒಂದು ಫ್ಯಾಷನ್ ಆಗಿದೆ: ವೆಂಕಯ್ಯನಾಯ್ಡು

ನವದೆಹಲಿ: ಇತ್ತೀಚೆಗೆ ಸಾಲ ಮನ್ನಾಗಾಗಿ ಒತ್ತಾಯಿಸುವುದು ಒಂದು ಫ್ಯಾಷನ್ ಆಗಿ ಬದಲಾಗಿದೆ ಎಂದು ಕೇಂದ್ರ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆ. ಆದರೆ ಸಾಲ ಮನ್ನಾ ಮಾಡುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಲಿಲ್ಲ. ಸಾಲ ಮನ್ನಾ ಮಾಡಬೇಕು, ಆದರೆ ಅದು ತೀರ ಸಂಕಷ್ಟದ ಸಂದರ್ಭಗಳಲ್ಲಿ ಆಗಬೇಕು. ಸಾಲ ಮನ್ನಾ ಮಾಡುವುದು ರೈತರ ಸುಧಾರಣೆಗೆ ಉಳಿದಿರುವ ಅಂತಿಮ ಪರಿಹಾರವಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವೆಂಕಯ್ಯನಾಯ್ಡು ರವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ, ಸುಮಾರು 40 ಸಾವಿರ ರೈತರು ಕಳೆದ ಮೂರು ವರ್ಷಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಾಗಿ ಸಾಲ ಮನ್ನಾ ಬೇಡಿಕೆ ಫ್ಯಾಷನ್ ಎಂದು ಹೇಳುವುದು ಅನ್ನದಾತರಿಗೆ ನೀಡುವ ಅಗೌರವ ಎಂದು ಹೇಳಿದ್ದಾರೆ.

ಕರ್ನಾಟಕ ಸರ್ಕಾರ ರಾಜ್ಯದ ರೈತರಿಗೆ ರೂ.50 ಸಾವಿರವರೆಗಿನ ಸಹಕಾರಿ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ವೆಂಕಯ್ಯ ನಾಯ್ಡು ಈ ಹೇಳಿಕೆ ನೀಡಿರುವುದು ಗಮನಾರ್ಹ. ಇದಕ್ಕೂ ಮುನ್ನ ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಪಂಜಾಬ್ ರಾಜ್ಯಗಳು ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದವು. ಇನ್ನು ಬಿಜೆಪಿ ಆಡಳಿತ ಮಧ್ಯಪ್ರದೇಶದಲ್ಲಿ ಸಾಲ ಮನ್ನಾ ಮತ್ತು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆಗಾಗಿ ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿವೆ.

Contact for any Electrical Works across Bengaluru

Loading...
error: Content is protected !!