ಮುಸ್ಲಿಂ ಯೋಗಾ ಗುರುವಿನ ಮನೆ ಮೇಲೆ ಕಲ್ಲು ತೂರಾಟ

ಯೋಗಾ ತರಬೇತಿ ನೀಡುತ್ತಿರುವ ಕಾರಣಕ್ಕೆ ಮುಸ್ಲಿಂ ಯೋಗಾ ಗುರು ರಫಿಯಾ ನಾಜ್ ವಿರುದ್ಧ ಇತ್ತೀಚೆಗೆ ಫತ್ವಾ ಹೊರಡಿಸಿದ್ದು ತಿಳಿದೇ ಇದೆ. ಇದೀಗ ರಫಿಯಾ ನಾಜ್ ಮನೆ ಮೇಲೆ ಕಿಡಿಗೇಡಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಜಾರ್ಖಂಡ್ ನ ದರೋಂದಾದಲ್ಲಿ ವಾಸವಿರುವ ರಫಿಯಾ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: [ರಾಮದೇವ್ ಶಿಷ್ಯೆ ರಫಿಯಾ ವಿರುದ್ಧ ಮುಸ್ಲಿಂ ಸಂಘಟನೆಗಳ ಫತ್ವಾ]

ನೇರ ಪ್ರಸಾರದಲ್ಲಿ ಸಂದರ್ಶನ ನೀಡುತ್ತಿದ್ದ ರಫಿಯಾ ಮಾತುಗಳನ್ನು ಕೇಳಿದ ಮುಸ್ಲಿಂ ಧಾರ್ಮಿಕ ಮುಖಂಡನೊಬ್ಬ ಕೆಂಡಾಮಂಡಲವಾಗಿದ್ದಾನೆ. ಆಕೆ ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾಳೆ ಎಂದು ಆರೋಪಿಸಿ ಕೂಡಲೇ ಗುಂಪಿನೊಂದಿಗೆ ರಫಿಯಾ ಮನೆ ಬಳಿಗೆ ಬಂದು ಆಕೆಯ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಘೋಷಣೆ ಕೂಗಿದ್ದಾನೆ.

ಇತ್ತೀಚೆಗೆ ಪ್ರಸಿದ್ಧ ಯೋಗಾ ಗುರು ಬಾಬಾ ರಾಮದೇವ್ ಅವರೊಂದಿಗೆ ವೇದಿಕೆ ರಫಿಯಾ ವೇದಿಕೆ ಹಂಚಿಕೊಂಡಿದ್ದು, ಕೆಲ ಮುಸ್ಲಿಂ ಧಾರ್ಮಿಕ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಆಕೆಯ ವಿರುದ್ಧ ಫತ್ವಾ ಜಾರಿ ಮಾಡಿದ್ದರು. ಹೀಗಾಗಿ ಆ ರಾಜ್ಯದ ಮುಖ್ಯಮಂತ್ರಿ ರಘುಬರ್ ದಾಸ್ ಆಕೆಗೆ ಬಿಗಿ ಭದ್ರತೆ ನೀಡುವಂತೆ ಪೊಲೀಸರಿಗೆ ಆದೇಶಿಸಿದ್ದರು. ಇದೀಗ ರಫಿಯಾ ಮನೆ ಮೇಲೆ ದಾಳಿ ನಡೆದ ಘಟನೆಗೆ ಪ್ರತಿಕ್ರಿಯಿಸಿದ ಬಾಬಾ ರಾಮದೇವ್ “ಇರಾಕ್, ಇರಾನ್, ಅಫ್ಘನಿಸ್ತಾನ, ಪಾಕಿಸ್ತಾನ, ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳಲ್ಲಿ ಮುಸ್ಲಿಮರು ಯೋಗಾ ಅಭ್ಯಾಸ ಮಾಡುತ್ತಾರೆ. ಯೋಗಾ ಎನ್ನುವುದು ಮಾನಸಿಕ, ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದ್ದು, ಇದರಲ್ಲಿ ಧರ್ಮದ ವಿಷಯ ತರಬಾರದು” ಎಂದು ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559