ಫೈರ್ ಬ್ರಾಂಡ್ ಯೋಗಿ, ಒಂದು ಹಿನ್ನೋಟ |News Mirchi

ಫೈರ್ ಬ್ರಾಂಡ್ ಯೋಗಿ, ಒಂದು ಹಿನ್ನೋಟ

ಲಕ್ನೋ: ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಯೋಗಿ ಆದಿತ್ಯನಾಥ್ ಪಕ್ಷದಲ್ಲಿ ಒಂದು ಫೈರ್ ಬ್ರಾಂಡ್. ಅವರು ನೀಡುವ ಕೆಲವು ಹೇಳಿಕೆಗಳು ಕೆಲವೊಮ್ಮೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದರೂ, ಜನರಲ್ಲಿ ಅವರಿಗಿರುವ ಪಾಪ್ಯುಲಾರಿಟಿಯೇ ಅವರನ್ನು ಇದುವರೆಗೂ ಕಾಪಾಡುತ್ತಾ ಬಂದಿದೆ. ಹಿಂದೂವಾದಿಯಾದ ಆದಿತ್ಯನಾಥ್ ಎಲ್ಲಾ ವೇದಿಕೆಗಳಲ್ಲೂ, ಚುನಾವಣಾ ಪ್ರಚಾರದಲ್ಲೂ ಹಿಂದುತ್ವ ಅಜೆಂಡಾವನ್ನು ಪ್ರಚಾರ ಮಾಡುತ್ತಿರುತ್ತಾರೆ. ಕಾವಿ ವಸ್ತ್ರಗಳನ್ನು ಧರಿಸಿಯೇ ವಿಶೇಷ ಜನಮನ್ನಣೆ ಗಳಿಸಿದ ಅವರು ಗೋರಖ್‌ಪುರ ಮಠಾಧಿಪತಿಯಾಗಿ ಮುಂದುವರೆಯುತ್ತಿದ್ದಾರೆ.

ರಾಜ್ಯಾದ್ಯಂತ ಜನಮನ್ನಣೆ ಹೊಂದಿರುವ ಅವರು, ಇತರೆ ಧರ್ಮಗಳವರನ್ನೂ ಹಿಂದೂಗಳನ್ನಾಗಿ ಬದಲಾಯಿಸುವುದೇ ತಮ್ಮ ಜೀವನದ ಗುರಿ ಎಂದು ಹೆಳುತ್ತಿರುತ್ತಾರೆ. ಇದಕ್ಕಾಗಿ ಹೋರಾಡುತ್ತಲೇ ಇರುವುದಾಗಿ ಧೈರ್ಯವಾಗಿ ಹೇಳುತ್ತಿರುತ್ತಾರೆ.

1972 ಜೂನ್ 5 ರಂದು ಜನ್ಮಿಸಿದ ಆಧಿತ್ಯನಾಥ್ 26 ವರ್ಷ ವಯಸ್ಸಿನಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಲೋಕಸಭೆಗೆ ಆಯ್ಕೆಯಾಗಿ ದಾಖಲೆ ಮಾಡಿದರು. 1998 ರಿಂದ ಇಲ್ಲಿಯವರೆಗೂ ಐದು ಬಾರಿ ಗೋರಖ್‌ಪುರದಿಂದ ಲೋಕಸಭೆಗೆ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. 2002 ರಲ್ಲಿ ಅವರು ಹಿಂದೂ ಯುವವಾಹಿನಿ ಸ್ಥಾಪಿಸಿದರು. ಅಂದಿನಿಂದ ಆ ಸಂಘಟನೆ ಆಧಿತ್ಯನಾಥ್ ಅವರು ವಿದ್ಯಾರ್ಥಿ ನಾಯಕನಿಂದ ಹಿಡಿದು ರಾಷ್ಡ್ರೀಯ ನಾಯಕನ ಹಂತಕ್ಕೆ ಬೆಳೆಯಲು ಸಹಕಾರಿಯಾಗಿದೆ.

ಅಯೋಧ್ಯೆಯಲ್ಲಿ ವಿವಾದಿತ ಸ್ಥಳದಲ್ಲಿ ರಾಮಮಂದಿರವನ್ನು ನಿರ್ಮಿಸಲು ಒತ್ತಾಯಿಸುವ ಇವರು, ಬಿಜೆಪಿ ನಾಯಕತ್ವದ ವಿರುದ್ಧ ಹಲವು ಬಾರಿ ಅಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಹಿಂದೂ ಮತದಾರರ ಮೇಲೆ ಆದಿತ್ಯನಾಥ್ ಅವರಿಗಿರುವ ಹಿಡಿತವನ್ನು ಮನಗಂಡಿದ್ದ ರಾಷ್ಟ್ರೀಯ ನಾಯಕರು ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಧೈರ್ಯ ಮಾಡಲಿಲ್ಲ.

2005 ರಲ್ಲಿ ಆದಿತ್ಯನಾಥ್ ಉತ್ತರಪ್ರದೇಶದಲ್ಲಿ ಸುಮಾರು 5 ಸಾವಿರ ಜನ ಇತರೆ ಧರ್ಮೀಯರನ್ನು ಹಿಂದೂ ಧರ್ಮಕ್ಕೆ ಬದಲಿಸಿದ್ದರು. ಉತ್ತರಪ್ರದೇಶವನ್ನು ಮತ್ತು ಭಾರತವನ್ನು ಹಿಂದೂ ದೇಶವನ್ನಾಗಿ ಮಾಡುವವರೆಗೂ ವಿಶ್ರಮಿಸುವುದಿಲ್ಲ ಎಂದು ಅವರು ಆ ಸಂದರ್ಭದಲ್ಲಿ ಹೇಳಿದ್ದರು. 2007 ರ ಜನವರಿಯಲ್ಲಿ ಮೊಹರಂ ಮೆರವಣಿಗೆಯಲ್ಲಿ ಹಿಂದು ಮತ್ತು ಮುಸ್ಲಿಮರ ನಡುವೆ ಗಲಾಟೆ ನಡೆಯಿತು. ಈ ಸಂದರ್ಭದಲ್ಲಿ ಕೆಲವರು ಹಾರಿಸಿದ ಗುಂಡಿಗೆ ಹಿಂದೂ ಬಾಲಕನೊಬ್ಬ ಮೃತಪಟ್ಟ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಆದಿತ್ಯನಾಥ್, ನಿಷಾಧಾಜ್ಞೆ ಧಿಕ್ಕರಿಸಿ ಅಪಾರ ಜನಸ್ತೋಮದೊಂದಿಗೆ ರಸ್ತೆಯಲ್ಲಿ ಮೋಂಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು. ಕೊನೆಗೆ ಅವರ ಮೇಲೆ ಕೇಸು ದಾಖಲಾಗಿ ಜೈಲಿಗೂ ಹೋಗಬೇಕಾಯಿತು. ಆದಿತ್ಯನಾಥ್ ಬಂಧನ ಮತ್ತಷ್ಟು ಗಲಭೆಗಳಿಗೆ ಕಾರಣವಾಯಿತು.

ಅಸಹಿಷ್ಣುತೆ ಚರ್ಚೆಗಳ ಸಂದರ್ಭದಲ್ಲಿ

2015 ರಲ್ಲಿ ಅಸಹಿಷ್ಣುತೆ ಕುರಿತ ಚರ್ಚೆ ಜೋರಾಗಿದ್ದ ಸಂದರ್ಭದಲ್ಲಿ ಅವರು ಬಾಲಿವುಡ್ ನಟ ಶಾರೂಖ್ ಖಾನ್ ರನ್ನು ಉಗ್ರ ಹಫೀಜ್ ಸಯೀದ್ ಗೆ ಹೋಲಿಸಿದ್ದಲ್ಲದೇ, ದೇಶದ ಬಹುಸಂಖ್ಯಾತ ಜನರೇ ಸ್ಟಾರ್ ನಟನನ್ನಾಗಿ ಮಾಡಿದ್ದು, ಜನ ಶಾರೂಖ್ ಚಿತ್ರಗಳನ್ನು ಬಹುಷ್ಕರಿಸಿದರೇ ಆತ ಬೀದಿಗೆ ಬರಬೇಕಾಗುತ್ತದೆ ಎಂದು ಹೇಳಿದ್ದರು. ಹಾಗೆಯೇ ಸೂರ್ಯ ನಮಸ್ಕಾರ ಯೋಗಾದ ಒಂದು ಭಾಗವಾಗಿದ್ದು, ಇದನ್ನು ವಿರೋಧಿಸುವವರು ದೇಶ ಬಿಟ್ಟು ಹೋಗಬಹುದು ಇಲ್ಲವಾದರೆ ಸಮುದ್ರಕ್ಕೆ ಹಾರಬಹುದು ಎಂದು ಹೇಳಿದ್ದರು.

ತಮಗನ್ನಿಸಿದ್ದನ್ನು ಆರು ನೂರಾದರೂ ಹೇಳಿಯೇ ಸಿದ್ಧ, ಅದು ಲೋಕಸಭೆಯಾಗಬಹುದು, ಮತ್ತೊಂದು ಕಡೆಯಾಗಬಹುದು ಹಿಂಜರಿಯದ ವ್ಯಕ್ತಿತ್ವ ಅವರದ್ದು.

Loading...
loading...
error: Content is protected !!