ಅವಳಿಗಳನ್ನು ಬೇರ್ಪಡಿಸುವ ಅಪರೂಪದ ಶಸ್ತ್ರ ಚಿಕಿತ್ಸೆ ಆರಂಭ |News Mirchi

ಅವಳಿಗಳನ್ನು ಬೇರ್ಪಡಿಸುವ ಅಪರೂಪದ ಶಸ್ತ್ರ ಚಿಕಿತ್ಸೆ ಆರಂಭ

ಇದೇ ಮೊದಲ ಬಾರಿಗೆ ಭಾರತದಲ್ಲಿ ದೆಹಲಿಯಲ್ಲಿನ ಏಮ್ಸ್ ವೈದ್ಯರು ಅಪರೂಪದ ಶಸ್ತ್ರ ಚಿಕಿತ್ಸೆ ಆರಂಭಿಸಿದ್ದಾರೆ. ತಲೆಯ ಭಾಗದಲ್ಲಿ ಅಂಟಿಕೊಂಡು ಹುಟ್ಟಿರುವ ಅವಳಿ ಮಕ್ಕಳನ್ನು ಬೇರ್ಪಡಿಸಲು ವೈದ್ಯರು ಮುಂದಾಗಿದ್ದಾರೆ. ಒಡಿಶಾ ಕಂದಮಾಲ್ ಜಿಲ್ಲೆಯಲ್ಲಿ ಭುಯ್ಯಾನ್ ಮತ್ತು ಪುಷ್ಪ ಬಡ ದಂಪತಿಗಳಿಗೆ ಹುಟ್ಟಿದ ಜಗನ್ನಾಥ್, ಬಲಿಯಾಲ ಎಂಬ ಮಕ್ಕಳನ್ನು ಬೇರ್ಪಡಿಸುವ ಐತಿಹಾಸಿಕ ಶಸ್ತ್ರಚಿಕಿತ್ಸೆಯನ್ನು ಸೋಮವಾರ ಆರಂಭಿಸಿದ್ದಾರೆ. ಸದ್ಯ ಈ ಮಕ್ಕಳ ವಯಸ್ಸು 2 ವರ್ಷ 3 ತಿಂಗಳು.

ತುಂಬಾ ಅಪರೂಪದ ಈ ಇಬ್ಬರೂ ಮಕ್ಕಳನ್ನು ರಕ್ಷಿಸಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ, ಇಬ್ಬರಲ್ಲಿ ಒಬ್ಬರು ಬದುಕುಳಿದರೂ ಐತಿಹಾಸಿಕವಾಗಲಿದೆ ಎಂದು ಏಮ್ಸ್ ವೈದ್ಯರು ಹೇಳಿದ್ದಾರೆ. ಮೆದುಳಿನಿಂದ ಹೃದಯಕ್ಕೆ ರಕ್ತ ಪಂಪ್ ಮಾಡುವ ರಕ್ತನಾಳಗಳನ್ನು ಅವಳಿ ಮಕ್ಕಳು ಹಂಚಿಕೊಂಡು ಹುಟ್ಟಿದ್ದಾರೆ. ಹೀಗಾಗಿ ಈ ಆಪರೇಷನ್ ತುಂಬಾ ಕ್ಲಿಷ್ಟಕರವಾದದ್ದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಸುಮಾರು 40 ತಜ್ಞರು ಈ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟು 50 ಗಂಟೆಗಳ ಕಾಲ ಈ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಮೊದಲ ಹಂತದಲ್ಲಿ 6 ರಿಂದ 8 ಗಂಟೆಗಳ ಕಾಲ ಚಿಕಿತ್ಸೆ ನಡೆಯುತ್ತದೆ. ಪೀಡಿಯಾಟ್ರಿಕ್ ನ್ಯೂರೋ ಸರ್ಜನ್, ನ್ಯೂರೋ ಅನೆಸ್ಥೇಷಿಯಾ, ಪ್ಲಾಸ್ಟಿಕ್ ಸರ್ಜರಿ ತಜ್ಞರು, ಹೃದಯ ರಕ್ತನಾಳ ತಜ್ಞರು ಈ ಶಸ್ತ್ರ ಚಿಕಿತ್ಸೆಯಲ್ಲಿ ತೊಡಗಿಸಿಕೊಳ್ಳಲಿದ್ದು, ಜಪಾನಿನ ತಜ್ಞರೊಬ್ಬರು ಇವರಿಗೆ ಸಹಾಯ ಮಾಡಲಿದ್ದಾರೆ.

ಮಕ್ಕಳ ಮೆದುಳಿನ ರಚನೆಯನ್ನು ತಿಳಿಯಲು ಹಲವು ಬಾರಿ ಎಂ.ಆರ್.ಐ ಸ್ಕ್ಯಾನ್, ಆಂಜಿಯೋಗ್ರಾಮ್ ಮಾಡಲಾಗಿದೆ. ಇದರ ಜೊತೆಗೆ ವಿಶ್ವಾದ್ಯಂತ ನಡೆದ ಇಂತಹ ಶಸ್ತ್ರ ಚಿಕಿತ್ಸೆಗಳ ಅಧ್ಯಯನವನ್ನೂ ಮಾಡಿದ್ದು, ಅಂತಹ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದ ಕೆಲ ತಜ್ಞರ ಜೊತೆಗೆ ಚರ್ಚೆಯನ್ನೂ ಮಾಡಿದ್ದೇವೆ. ಅಂತಿಮವಾಗಿ ಈ ಶಸ್ತ್ರಚಿಕಿತ್ಸೆ ಕೈಗೊಳ್ಳಲು ತೀರ್ಮಾನಿಸಿದೆವು ಎಂದು ವೈದ್ಯರು ಹೇಳಿದ್ದಾರೆ. [ಇದನ್ನೂ ಓದಿ: ಈಕೆಯ ಕಣ್ಣಿನಲ್ಲಿ ಸಿಕ್ಕಿದ್ದು 27 ಕಾಂಟ್ಯಾಕ್ಟ್ ಲೆನ್ಸ್!]

ಹೀಗೆ ಒಬ್ಬರಿಗೊಬ್ಬರು ಅಂಟಿಕೊಂಡು ಹುಟ್ಟುವ ಮಕ್ಕಳು ತುಂಬಾ ಅಪರೂಪವಾಗಿ 2.5 ಕೋಟಿ ಮಕ್ಕಳಲ್ಲಿ ಒಂದು ಜನನ ಹೀಗಾಗುತ್ತದೆ. ನಮ್ಮ ದೇಶದಲ್ಲಿ ಹೀಗೆ ಪ್ರತಿ ವರ್ಷ ಸುಮಾರು 10 ಅವಳಿಗಳ ಜನನವಾಗುತ್ತದೆ. ಅವುಗಳಲ್ಲಿ ಹುಟ್ಟುತ್ತಿರುವಂತೆಯೇ ನಾಲ್ವರು ಸಾವನ್ನಪ್ಪಿದರೆ, 24 ಗಂಟೆ ಕಳೆಯುವುದರೊಳಗೆ ಇನ್ನು ಮೂವರು ಸಾವನ್ನಪ್ಪಿದ್ದಾರೆ. 1952 ರಿಂದ ಇಂತಹ ಸುಮಾರು 50 ಶಸ್ತ್ರಚಿಕಿತ್ಸೆಗಳನ್ನು ವಿಶ್ವದಲ್ಲಿ ಕೈಗೊಂಡಿದ್ದು, ಅವುಗಳಲ್ಲಿ ಯಶಸ್ವಿಯಾಗಿದ್ದು ಶೇ.25 ಕ್ಕಿಂತಲೂ ಕಡಿಮೆ.

Loading...
loading...
error: Content is protected !!