ಭಾರತದ ಆಚರಣೆಗಳಲ್ಲಿ ಮೂಗು ತೂರಿಸುವ ಪ್ರಭಾವೀ ವಿದೇಶಿ ಎನ್‌ಜಿಒ – News Mirchi

ಭಾರತದ ಆಚರಣೆಗಳಲ್ಲಿ ಮೂಗು ತೂರಿಸುವ ಪ್ರಭಾವೀ ವಿದೇಶಿ ಎನ್‌ಜಿಒ

ದಕ್ಷಿಣ ಕನ್ನಡದಲ್ಲಿ ಬೇಸಾಯಕ್ಕೆ ಕೋಣಗಳ ಬಳಕೆ ಹೆಚ್ಚು. ಭತ್ತದ ಮೊದಲಿನ ಕೊಯ್ಲಿನ ನಂತರ ಬಲಿಷ್ಠ ಕೋಣಗಳ ನಡುವೆ ಸ್ಪರ್ಧೆಗಳನ್ನು ನಡೆಸುತ್ತಾರೆ. ಇದು ಕರಾವಳಿಗರ ಜಾನಪದ ಕ್ರೀಡೆಯೂ ಹೌದು. ಕ್ರೀಡೆಯ ಹಿನ್ನೆಯಲ್ಲಿಯೇ ಕ್ರೀಡೆಯಲ್ಲಿ ಭಾಗವಹಿಸುವ ಕೋಣಗಳನ್ನು ದಷ್ಟಪುಷ್ಠವಾಗಿ ಸಾಕಿ ತಯಾರು ಮಾಡುತ್ತಾರೆ. ಇಲ್ಲಿ ಕೋಣಗಳನ್ನು ಹಿಂಸಿಸುವ ಯಾವುದೇ ಉದ್ದೇಶವಿರುವುದಿಲ್ಲ. ಆದರೆ ಇದು ಪ್ರಾಣಿಗಳಿಗೆ ನೀಡುವ ಹಿಂಸೆ ಎಂಬ ಕಾರಣವೊಡ್ಡಿ ಈ ಕ್ರೀಡೆಗೆ ನಿಷೇಧ ವಿಧಿಸಲಾಗಿದೆ.

ವಿದೇಶಿ ಎನ್‌ಜಿಒ “ಪೆಟಾ” ಭಾರತದಲ್ಲಿ ಯಾವ ಆಚರಣೆ ಸರಿ ಯಾವುದು ತಪ್ಪು ಎಂದು ನಿರ್ಧರಿಸುತ್ತಿದೆ. ಅದರ ಖ್ಯಾತೆಯಿಂದಲೇ ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಿಷೇಧವಾಗಿದ್ದು. ಆ ತೀರ್ಪಿನ ಆಧಾರದಲ್ಲಿಯೇ ಇಲ್ಲಿ ಕೂಡಾ ಕಂಬಳ ನಿಷೇಧವಾಗಿದೆ. ಯಾವುದು ಪ್ರಾಣಿ ಹಿಂಸೆ, ಯಾವುದು ನಿಷೇಧಿಸಬೇಕು ಎಂಬುದನ್ನು ವಿದೇಶಿ ಪ್ರಭಾವ ಹೊಂದಿರುವ ಎನ್‌ಜಿಒ ಒಂದು ನಿರ್ಧರಿಸುವ ಮಟ್ಟಕ್ಕೆ ಬೆಳೆದು ನಿಂತಿದೆ.

1980 ಅಮೆರಿಕದಲ್ಲಿ ಪ್ರಾಣಿದಯಾ ಸಂಸ್ಥೆ ಎಂಬ ಹೆಸರಿನಲ್ಲಿ ಸ್ಥಾಪನೆಯಾದ ಎನ್‌ಜಿಒ “ಪೆಟಾ”. ದಿನಕಳೆಯುತ್ತಿದ್ದಂತೆ ಅಮೆರಿಕದಲ್ಲಿ ಬೀದಿ ನಾಯಿ ಹಾವಳಿಯ ಬಗ್ಗೆ ಅಸಂಖ್ಯಾತ ಕರೆಗಳು ಈ ಎನ್‌ಜಿಒ ಗೆ ಬರಲಾರಂಭಿಸಿದವು. ಲಕ್ಷಾಂತರ ಬೀದಿನಾಯಿಗಳನ್ನು ಹಿಡಿದು ತಂದು ತನ್ನ ವಶದಲ್ಲಿಟ್ಟುಕೊಂಡಿತು ಆ ಸಂಸ್ಥೆ. ನಂತರ ಇದಕ್ಕೊಂದು ಕಾನೂನು ರೂಪಿಸುವಂತೆ ಅಮೆರಿಕಾ ಸರ್ಕಾರದ ಮೇಲೆ ಒತ್ತಡ ತಂದಿತು. ಅಮೆರಿಕಾ ತಂದ ಕಾನೂನಿನ ಪ್ರಕಾರ ಸಂಸ್ಥೆಯು ಬೀದಿನಾಯಿಗಳನ್ನು 15 ದಿನಗಳ ಕಾಲ ತನ್ನ ವಶದಲ್ಲಿಟ್ಟುಕೊಂಡು ನಾಯಿಗಳ ಮಾಲೀಕರು ಬಂದರೆ ಅವರಿಗೆ ಒಪ್ಪಿಸುವುದು, ಇಲ್ಲವಾದರೆ ಅ ನಾಯಿಗಳನ್ನು ಎನ್‌ಜಿಒ ಕೊಲ್ಲಬಹುದಾಗಿತ್ತು. ಕೆಲ ಮೂಲಗಳ ಪ್ರಕಾರ 2015 ರಲ್ಲಿ ತನ್ನ ವಶದಲ್ಲಿದ್ದ ಶೇ.90 ರಷ್ಟು ಅಂದರೆ ಸುಮಾರು 35 ಸಾವಿರ ನಾಯಿಗಳನ್ನು ಈ ಸಂಸ್ಥೆನಾಯಿಗಳನ್ನು ವರ್ಜೀನಿಯಾದ ತನ್ನ ಹೆಡ್ ಕ್ವಾರ್ಟರ್ಸ್‌ನಲ್ಲಿ ಕೊಂದಿದೆ. ಇಂತಹ ವಿದೇಶೀ ಸರ್ಕಾರೇತರ ಸಂಸ್ಥೆ ಪ್ರಾಣಿ ಹಿಂಸೆಯ ಬಗ್ಗೆ ಮಾತನಾಡುವುದು ನಿಜಕ್ಕೂ ಸೋಜಿಗ.

ಪ್ರತಿನಿತ್ಯ ಕಸಾಯಿಖಾನೆಗಳಲ್ಲಿ ಬಲಿಯಾಗುವ ಪ್ರಾಣಿಗಳ ಬಗ್ಗೆ ಚಕಾರವೆತ್ತದ ಈ ವಿದೇಶೀ ಸರ್ಕಾರೇತರ ಸಂಸ್ಥೆಗೆ, ಡರ್ಬಿ ರೇಸ್ ನಲ್ಲಿ ಕುದುರೆಗಳಿಗೆ ಹಿಂಸೆಯಾಗುತ್ತದೆ ಎನ್ನುವುದು ಕಾಣುವುದಿಲ್ಲ, ಮೆಕ್ಸಿಕೋದಲ್ಲಿ ನಡೆಯುವ ಅಮಾನವೀಯ ಗೂಳಿ ಕಾಳಗ ಕಾಣುವುದಿಲ್ಲ. ಜಲ್ಲಿಕಟ್ಟು, ಕಂಬಳಗಳಂತಹ ಸಾಂಪ್ರದಾಯಿಕ ಆಚರಣೆಗಳ ವಿರುದ್ಧ ಹೋರಾಡುತ್ತದೆ. ದೀಪಾವಳಿ ವೇಳೆ ಸುಡುವ ಪಟಾಕಿಗಳ ನಿಷೇಧಕ್ಕೆ ನಿರಂತರ ಅಭಿಯಾನಗಳನ್ನು ನಡೆಸುತ್ತಿದೆ. ಮುಂದೊಂದು ದಿನ ಜಾನುವಾರುಗಳನ್ನು ಬೇಸಾಯಕ್ಕೆ ಬಳಸುವುದೂ ಪ್ರಾಣಿ ಹಿಂಸೆ ಎಂದರೂ ಸುಮ್ಮನೆ ನೋಡುವ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ.

ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು ಕ್ರೀಡೆಗೆ ಹೋಲಿಸಿದರೆ ಕಂಬಳವನ್ನು ನಿಷೇಧಿಸಲು ಕಾರಣಗಳೇ ಇಲ್ಲ. ತಮಿಳುನಾಡಿನಲ್ಲಿ ಒಗ್ಗಟ್ಟಿನ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ನಿಷೇಧದ ನಡುವೆಯೂ ಕೇಂದ್ರದ ಸರ್ಕಾರದ ಮೇಲೆ ಒತ್ತಡ ತಂದು ಜಲ್ಲಿಕಟ್ಟು ಆಚರಣೆಗೆ ಸುಗ್ರೀವಾಜ್ಞೆ ತಂದು ಅಲ್ಲಿನ ಸಾಂಪ್ರದಾಯಿಕ ಕ್ರೀಡೆಯ ಆಚರಣೆ ಮಡುತ್ತಿದ್ದಾರೆ.

ಇಂತಹ ಆಚರಣೆಗಳ ವಿರೋಧದ ಹಿಂದಿನ ಸತ್ಯ ಅರಿವಾಗುತ್ತಿದ್ದಂತೆ ತಮಿಳುನಾಡು ಮಾತ್ರವಲ್ಲ ಕನ್ನಡಿಗರೂ ಸೇರಿದಂತೆ ಎಲ್ಲಾ ಕಡೆಯಿಂದ ಜಲ್ಲಿಕಟ್ಟು ಪರ ಬೆಂಬಲ ವ್ಯಕ್ತವಾಯಿತು. ಕರ್ನಾಟಕದಲ್ಲಿ ಕಂಬಳ ಕ್ರೀಡೆ ಕರಾವಳಿಗೆ ಸೀಮಿತವಾಗಿದ್ದು ಇದರ ಬಗ್ಗೆ ಬಹುತೇಕ ಜನರಿಗೆ ಗೊತ್ತಿಲ್ಲದ ಕಾರಣ ತಮಿಳುನಾಡಿನಲ್ಲಿ ಸಿಕ್ಕಂತ ಬೆಂಬಲ ಸಿಗುತ್ತಿಲ್ಲ. ಆದರೂ ಸಾಮಾಜಿಕ ತಾಣಗಳಲ್ಲಿ ಇದರ ಕುರಿತ ಚರ್ಚೆಯ ಬಿಸಿ ಏರುತ್ತಿದೆ. ರಾಜಕಾರಣಿಗಳೂ ತುಟಿ ಬಿಚ್ಚಲು ಆರಂಭಿಸಿದ್ದಾರೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕು.

Loading...

Leave a Reply

Your email address will not be published.