ಮಾಜಿ ಸಚಿವೆ ಜಯಂತಿ ನಟರಾಜನ್ ಗೆ ಭ್ರಷ್ಟಾಚಾರ ಉರುಳು, ಸಿಬಿಐ ದಾಳಿ – News Mirchi

ಮಾಜಿ ಸಚಿವೆ ಜಯಂತಿ ನಟರಾಜನ್ ಗೆ ಭ್ರಷ್ಟಾಚಾರ ಉರುಳು, ಸಿಬಿಐ ದಾಳಿ

ಚೆನ್ನೈ: ಮಾಜಿ ಕೇಂದ್ರ ಸಚಿವೆ ಜಯಂತಿ ನಟರಾಜನ್ ಅವರಿಗೆ ಭ್ರಷ್ಟಾಚಾರದ ಉರುಳು ಬಿಗಿಯಾಗುತ್ತಿದೆ. ಸಚಿವೆಯಾಗಿದ್ದ ಸಮಯದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಅರಣ್ಯ ಭೂಮಿಯಲ್ಲಿ ಗಣಿಗಾರಿಗೆ ಮಾಡಲು ಅನುಮತಿ ನೀಡಿದ್ದಾರೆಂಬ ಆರೋಪಗಳ ಮೇಲೆ ಎಫ್.ಐ.ಆರ್. ದಾಖಲಿಸಿಕೊಂಡಿರುವ ಸಿಬಿಐ, ಚೆನ್ನೈನಲ್ಲಿ ಆಕೆಯ ನಿವಾಸದಲ್ಲಿ ಶೋಧ ನಡೆಸಿದೆ. ಶನಿವಾರ ರಾತ್ರಿಯವರೆಗೂ ರೇಡ್ ಮುಂದುವರೆದಿತ್ತು. 10 ಜನ ಸಿಬಿಐ ಆಧಿಕಾರಿಗಳ ತಂಡ ಅಳ್ವಾರ್ ಪೇಟೆಯ ಜಯಂತಿ ನಿವಾಸವನ್ನು ವಶಕ್ಕೆ ಪಡೆದಿದೆ.

ಜಯಂತಿಯೊಂದಿಗೆ ಆಕೆಯ ಆಪ್ತರಾಗಿದ್ದ ಕಾಂಗ್ರೆಸ್ ಮಾಜಿ ಶಾಸಕ, ಇತರೆ ಬೆಂಬಲಿಗರು, ಆತ್ಮೀಯರ ನಿವಾಸಗಳು ಮತ್ತು ಕಛೇರಿಗಳ ಮೇಲೆ ಸಿಬಿಐ ದಾಳಿ ನಡೆಯಿತು. 2012 ರಲ್ಲಿ ಜಯಂತಿ ನಟರಾಜನ್ ಕೇಂದ್ರ ಸಚಿವೆಯಾಗಿದ್ದಾಗ ನಿಯಮಗಳನ್ನು ಉಲ್ಲಂಘಿಸಿ ಜಾರ್ಖಂಡ್ ನಲ್ಲಿನ ಸಿಂಗ್ ಭುಮ್ ಜಿಲ್ಲೆಯ 55.79 ಹೆಕ್ಟೇರ್ ಅರಣ್ಯ ಭೂಮಿಯನ್ನು ಎಲಕ್ಟ್ರೋಸ್ಟೀಲ್ ಕ್ಯಾಸ್ಟಿಂಗ್ ಕಂಪನಿಗೆ ನೀಡಿದ್ದರು ಎಂದು ಸಿಬಿಐ ಹೇಳಿದೆ.

ಜೈರಾಮ್ ರಮೇಶ್ ಪರಿಸರ ಸಚಿವರಾಗಿದ್ದಾಗ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು, ಆದರೆ ನಟರಾಜನ್ ಆ ಪರಿಸರ ಖಾತೆಯನ್ನು ಪಡೆದ ಕೆಲವೇ ದಿನಗಳಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ. ಜೈರಾಮ್ ರಮೇಶ್ ತಿರಸ್ಕರಿಸಿದ್ದ ಪ್ರಸ್ತಾವನೆಯಲ್ಲಿ ಯಾವುದೇ ಬದಲಾವಣೆ ಮಾಡದೆಯೇ ಅಂಗೀಕಾರ ದೊರೆತಿರುವುದು ಗಮನಿಸಬೇಕಾದ ಅಂಶ. ಸುಪ್ರೀಂ ಕೋರ್ಟ್ ಅದೇಶಗಳು, ಅಂದಿನ ಅರಣ್ಯ ಇಲಾಖೆ ಡೈರೆಕ್ಟರ್ ಜನರಲ್ ಸೂಚನೆಗಳನ್ನೂ ಧಿಕ್ಕರಿಸಿ ಜಯಂತಿ ಈ ತೀರ್ಮಾನ ಕೈಗೊಂಡಿದ್ದರೆಂದು ಸಿಬಿಐ ಹೇಳಿದೆ.

ಸಚಿವೆಯಾಗಿದ್ದ ಸಂದರ್ಭದಲ್ಲಿ ಹಲವಾರು ಸಂಸ್ಥೆಗಳಿಗೆ ನಿಯಮಗಳಿಗೆ ವಿರುದ್ಧವಾಗಿ ಅನುಮತಿಗಳನ್ನು ನೀಡುವ ಮೂಲಕ ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ ಎಂದು ಸಿಬಿಐ ಗೆ ಆರೋಪ ಬಂದಿತ್ತು. ಜಯಂತಿ ನಟರಾಜನ್ ಗೆ ಸೇರಿದ ಹಲವಾರು ವಿದೇಶಿ ಸಂಸ್ಥೆಗಳಿಗೆ ಆನ್ಲೈನ್ ಮೂಲಕ ನಗದು ವರ್ಗಾವಣೆ ನಡೆದಿರುವುದಾಗಿ ಮಾಹಿತಿಯಿದೆ. ಮನಮೋಹನ್ ಸಿಂಗ್ ಸರ್ಕಾರದಲ್ಲಿ(ಯುಪಿಎ-2) 2011-13 ರವರೆಗೆ ಜಯಂತಿ ನಟರಾಜನ್ ಪರಿಸರ ಸಚಿವೆಯಾಗಿದ್ದರು.

Contact for any Electrical Works across Bengaluru

Loading...
error: Content is protected !!