ಗಾಂಧಿ ಮೊಮ್ಮಗನ ದಯನೀಯ ಸ್ಥಿತಿ

ಉಪ್ಪಿನ ಸತ್ಯಾಗ್ರಹದಲ್ಲಿ ದಂಡಿ ಬೀಚ್‌ನಲ್ಲಿ ಹತ್ತು ವರ್ಷದ ಬಾಲಕ ಗಾಂಧೀಜಿಯವರ ಕೈಯಲ್ಲಿನ ಕೋಲು ಹಿಡಿದು ಅವರನ್ನು ಕರೆದೊಯ್ಯುತ್ತಿರುವ ಚಿತ್ರ ಎಲ್ಲರನ್ನೂ ಅಕರ್ಷಿಸುತ್ತದೆ. ಚಿತ್ರದಲ್ಲಿನ ಅಂದಿನ ಆ ಬಾಲಕನ ಹೆಸರು ‘ಕಾನೂ ರಾಮ್ ದಾಸ್ ಗಾಂಧಿ‘ (ಈಗ ವಯಸ್ಸು 87 ವರ್ಷ). ಆತ ಮಹಾತ್ಮಾ ಗಾಂಧಿಯವರ ಮೊಮ್ಮಗ. ದಂಡಿ ಯಾತ್ರೆಯಲ್ಲಿ ಪಾಲ್ಗೊಂಡು ಬದುಕುಳಿದ ಬೆರಳೆಣಿಕೆಯಷ್ಟು ಜನರಲ್ಲಿ ಕಾನೂ ಗಾಂಧಿಯೂ ಒಬ್ಬರು. ರಾಷ್ಟ್ರಪಿತನ ಮೊಮ್ಮಗನಾಗಿ, ನಾಸಾ ವಿಜ್ಞಾನಿಯಾಗಿ ಉತ್ತಮ ಹಿನ್ನೆಲೆಯಿದ್ದರೂ ಈಗ ಅವರನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಸೂರತ್‌ನ ಆಶ್ರಮವೊಂದರ ಆಸ್ಪತ್ರೆಯಲ್ಲಿ ದಯನೀಯ ಸ್ಥಿತಿಯಲ್ಲಿ ಕೊನೆಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಪತ್ನಿ ಶಿವಲಕ್ಷ್ಮಿ(80) ಹೊರತುಪಡಿಸಿ ತನ್ನವರೆಂದು ಹೇಳಿಕೊಳ್ಳುವವರು ಯಾರೂ ಅವರಿಗೆ ಇಲ್ಲ.

ರಾಷ್ಟ್ರಪಿತನ ಮೊಮ್ಮಗ , ಮಹಾತ್ಮ ಗಾಂಧಿಯವರ ಆಪ್ತನಾಗಿ ಅವರ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದರು. ಸ್ವಾತಂತ್ರ್ಯ ಬಂದ ನಂತರ ಭಾರತದಲ್ಲಿ ಅಮೆರಿಕಾ ರಾಯಭಾರಿ ಜಾನ್ ಕೆನ್ನೆತ್ ನೆರವಿನಿಂದ ಮೆಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಉನ್ನತ ವ್ಯಾಸಂಗ ಮಾಡುವ ಅವಕಾಶ ಲಭಿಸಿತು. ಆ ನಂತರ ನಾಸಾ, ಅಮೆರಿಕಾ ರಕ್ಷಣಾ ಇಲಾಖೆಯಲ್ಲಿ ಉದ್ಯೋಗ ಮಾಡಿದ್ದರು. ಈ ಸಂದರ್ಭದಲ್ಲೇ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನಾ ವಿದ್ಯಾರ್ಥಿನಿ ಶಿವಲಕ್ಷ್ಮಿಯವರನ್ನು ಮದುವೆಯಾಗಿದ್ದರು. ಇವರಿಗೆ ಮಕ್ಕಳಿಲ್ಲ. 40 ವರ್ಷ ಅಮೆರಿಕಾದಲ್ಲಿದ್ದ ದಂಪತಿಗಳು 2014 ರಲ್ಲಿ ಭಾರತಕ್ಕೆ ವಾಪಸಾಗಿದ್ದರು.

ಇಲ್ಲಿ ಸ್ವಂತ ಮನೆ ಇಲ್ಲದ ಕಾರಣ ಕೆಲ ಕಾಲ ಆಶ್ರಮಗಳು, ಛತ್ರಗಳಲ್ಲಿ ಕಳೆದರು. ಸಂಪಾದನೆಯನ್ನೆಲ್ಲಾ ದಾನ ಧರ್ಮ ಮಾಡಿ ಕೈ ಖಾಲಿ ಮಾಡಿಕೊಂಡಿದ್ದರು. ಹದಿನೈದು ದಿನಗಳಿಂದ ಸೂರತ್ ನ ರಾಧಾಕೃಷ್ಣನ್ ದೇವಾಲಯದ ನೇತೃತ್ವದಲ್ಲಿ ನಡೆಯುತ್ತಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಅವರ ಚಿಕಿತ್ಸೆಯನ್ನು ಉಚಿತವಾಗಿ ಭರಿಸುತ್ತಲೇ ದಂಪತಿಗಳನ್ನು ನೋಡಿಕೊಳ್ಳಲು ಒಬ್ಬ ವ್ಯಕ್ತಿಯನ್ನು ನೇಮಿಸಿದೆ.

ಕಾನೂ ಬಾಲ್ಯಮಿತ್ರ, ಮಹಾತ್ಮಾ ಗಾಂಧಿ ಸಹಚರನ ಮೊಮ್ಮಗನಾದ ಧೀಮಂತ್ ಭದಿಯಾ (87) ಇತ್ತೀಚೆಗೆ ತಮ್ಮ ಕೈಲಾದಷ್ಟು ಖರ್ಚಿಗೆ ಹಣ ನೀಡಿದ್ದರು. ಮುಂಬೈ, ಬೆಂಗಳೂರುಗಳಲ್ಲಿರುವ ಕಾನೂ ಸಹೋದರಿಯರೂ ವೃದ್ಧಾಪ್ಯದ ಕಾರಣ ಫೋನ್ ಮೂಲಕವೇ ಆರೋಗ್ಯದ ವಿವರಗಳನ್ನು ತಿಳಿದುಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಕೇಂದ್ರ ಸಚಿವರೊಬ್ಬರು ಇವರ ದಯನೀಯ ಸ್ಥಿತಿಯನ್ನು ತಿಳಿದು ಪ್ರಧಾನಿವರೊಂದಿಗೆ ಮಾತನಾಡಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಪ್ರಧಾನಿ ಮೋದಿ ಅಗತ್ಯ ನೆರವು ನೀಡುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಕೇಂದ್ರ ಸಚಿವರಾಗಲೀ, ಗುಜರಾತ್ ಸಚಿವರಾಗಲೀ ಅವರನ್ನು ಮತ್ತೆ ಭೇಟಿಯಾಗಿಲ್ಲ ಎಂದು ತಿಳಿದುಬಂದಿದೆ ಎಂದು ಬಧಿಯಾ ಹೇಳಿದ್ದಾರೆ.

ಅಕ್ಟೋಬರ್ 22 ರಂದು ಕಾನೂ ಗಾಂಧಿಗೆ ಎದೆನೋವು ಕಾಣಿಸಿಕೊಂಡಿದ್ದು ಬಂದು ದೇಹದ ಎಡಭಾಗ ಕೆಲಸ ಮಾಡುತ್ತಿಲ್ಲ. ಹೀಗಾಗಿ ಅವರು ಹಾಸಿಗೆಗೆ ಸೀಮಿತರಾದರು. ಪತ್ನಿ ಶಿವಲಕ್ಷ್ಮಿಗೆ ಕಿವಿ ಸರಿಯಾಗಿ ಕೇಳುವುದಿಲ್ಲ ಎಂದು ಆಶ್ರಮದ ವೈದ್ಯರು ಹೇಳಿದ್ದಾರೆ.

Related News

loading...
error: Content is protected !!