ಗೌರಿ ಲಂಕೇಶ್ ಪತ್ರಿಕೆಯ ಭವಿಷ್ಯವೇನು? – News Mirchi

ಗೌರಿ ಲಂಕೇಶ್ ಪತ್ರಿಕೆಯ ಭವಿಷ್ಯವೇನು?

ಗೌರಿ ಲಂಕೇಶ್ ಹತ್ಯೆ ನಂತರ ಅವರು ನಡೆಸುತ್ತಿದ್ದ “ಗೌರಿ ಲಂಕೇಶ್” ಪತ್ರಿಕೆಯ ಈ ವಾರದ ಸಂಚಿಕೆ ನಿಂತುಹೋಗಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೆಯ ಭವಿಷ್ಯ ಈಗ ಪ್ರಶ್ನಾರ್ಹವಾಗಿದೆ. ಗೌರಿ ಲಂಕೇಶ್ ಪತ್ರಿಕೆ ಮುಂದುವರೆಯುತ್ತದಾ, ಮುಂದುವರೆದರೆ ಅದನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ.

ಶುಕ್ರವಾರ ಬಸವನಗುಡಿಯಲ್ಲಿ ಪತ್ರಿಕೆಯ ಪ್ರಧಾನ ಕಛೇರಿಯಲ್ಲಿ ಪತ್ರಿಕೆಯ ಸಂಪಾದಕೀಯ ಸದಸ್ಯರು ಸಭೆ ಸೇರಿ ಈ ವಿಷಯದ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಆದರೆ ತಾವು ಕೇವಲ ಸೆಪ್ಟೆಂಬರ್ 12 ರಂದು ಗೌರಿ ಲಂಕೇಶ್ ಅವರಿಗಾಗಿ “ನಾನು ಗೌರಿ” ಹೆಸರಿನಲ್ಲಿ ನಡೆಸುವ ಸಭೆ ಸಿದ್ಧತೆ ಕುರಿತು ಚರ್ಚಿಸಿದ್ದೇವೆ ಎಂದು ಸದಸ್ಯರು ಹೇಳುತ್ತಿದ್ದಾರೆ.

ಸದ್ಯ ಏಳು ಜನ ಉದ್ಯೋಗಿಗಳು ಈ ವಾರ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದು, ಇವರಲ್ಲಿ ಇಬ್ಬರು ಪಾರ್ಟ್ ಟೈಮ್ ಉದ್ಯೋಗಿಗಳು. ಗೌರಿ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದ ನಂತರವೇ ಈ ಪತ್ರಿಕೆಯ ಭವಿಷ್ಯತ್ತಿನ ಕುರಿತು ಒಂದು ನಿರ್ಧಾರ ತೆಗೆದುಕೊಳ್ಳುತ್ತೇವೆ, ಅದಕ್ಕೆ ಇನ್ನೂ ಸಮಯ ಹಿಡಿಯಬಹುದು ಎಂದು ಹೇಳಿದ್ದಾರೆ.

ಗೌರಿ ಕುಟುಂಬ ಸದಸ್ಯರು ಈಗ ಶಾಕ್ ನಲ್ಲಿದ್ದಾರೆ. ಅದರಿಂದ ಅವರು ಹೊರಬರಲು ಮತ್ತಷ್ಟು ಸಮಯ ಬೇಕಾಗುತ್ತದೆ. ಪತ್ರಿಕೆ ಮುಂದುವರೆಯಬೇಕು ಎಂದು ಆಪ್ತರು ಹೇಳುತ್ತಿದ್ದಾರೆ. ಆದರೆ ಆಕೆಯ ಸಾವಿಗೆ ಪತ್ರಿಕೆಯೇ ಕಾರಣವೆಂದು ಕುಟುಂಬ ಸದಸ್ಯರು ಭಾವಿಸುತ್ತಿದ್ದಾರೆ. ಆದ್ದರಿಂದ ಅದನ್ನು ಮುಂದುವರೆಸುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಹೇಳುತ್ತಿದ್ದಾರೆ. ಈ ಹಿಂದೆಯೂ ಹಲವು ಬಾರಿ ಪತ್ರಿಕೆಯಿಂದ ಸಮಸ್ಯೆಗಳು ಎದುರಾಗಿದ್ದವು. ಆಗಲೇ ಪತ್ರಿಕೆ ಮುಂದುವರೆಯುತ್ತಾ ಎಂಬ ಪ್ರಶ್ನೆ ಕಾಡುತ್ತಿತ್ತು ಎಂದು ಗೌರಿ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಚಂದ್ರೇಗೌಡ ಎಂಬುವವರು ಹೇಳಿದ್ದಾರೆ.

Loading...