ಬಿಜೆಪಿ ಸಂಸದರ ಬ್ಯಾಂಕ್ ಖಾತೆ ವಿವರ ಕೇಳಿದ ಮೋದಿ |News Mirchi

ಬಿಜೆಪಿ ಸಂಸದರ ಬ್ಯಾಂಕ್ ಖಾತೆ ವಿವರ ಕೇಳಿದ ಮೋದಿ

ನೋಟು ರದ್ದು ವಿಷಯ ಬಿಜೆಪಿ ನಾಯಕರಿಗೆ ಮೊದಲೇ ತಿಳಿದಿತ್ತು ಎಂಬ ಆರೋಪಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ತಮ್ಮ ಪಕ್ಷದ ಸಂಸದರಿಗೆ ಹಲವು ಸೂಚನೆ ನೀಡಿದ್ದಾರೆ.

ಬಿಜೆಪಿ ಜನಪ್ರತಿನಿಧಿಗಳೆಲ್ಲರೂ ನವೆಂಬರ್ 8 ರಿಂದ ಡಿಸೆಂಬರ್ 31 ರವರೆಗೆ ತಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಪಕ್ಷದ ಅಧ್ಯಕ್ಷ ಅಮಿತ್ ಶಾ ರವರಿಗೆ ನೀಡಬೇಕೆಂದು ಸೂಚಿಸಿದ್ದಾರೆ. ದೆಹಲಿಯಲ್ಲಿ ಮಂಗಳವಾರ ನಡೆದ ಬಿಜೆಪಿಯ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ಈ ಸ್ಟೇಟ್‌ಮೆಂಟ್ ಗಳನ್ನೆಲ್ಲಾ ಜನವರಿ 1 ರೊಳಗೆ ತಲುಪಿಸಬೇಕು ಎಂದರು. ಪ್ರತಿಪಕ್ಷಗಳ ಆರೋಪಗಳೆಲ್ಲವೂ ರಾಜಕೀಯ ದುರುದ್ದೇಶದಿಂದ ಕೂಡಿವೆ ಎಂದ ಮೋದಿ, ದೇಶದಲ್ಲಿ ಕಪ್ಪು ಹಣ ಹೆಚ್ಚುವುದನ್ನು ಸಹಿಸಲು ಅಸಾಧ್ಯ ಎಂದು ಹೇಳಿದರು.

ಕಪ್ಪು ಹಣವನ್ನು ಚಲಾವಣೆಗೆ ತರಲೆಂದೇ ಆದಾಯ ತೆರಿಗೆ ಕಾಯ್ದೆಯಲ್ಲಿ ತಿದ್ದುಪಡಿ ತರುತ್ತಿದ್ದಾರೆ ಎಂಬ ಆರೋಪಗಳನ್ನು ಅವರು ಖಂಡಿಸಿದರು. ‘ಲೂಟಿಯಾದ ಹಣ ಜನರಿಗೆ ತಲುಪಬೇಕು, ಅವರ ಅಭಿವೃದ್ಧಿಗೆ ಉಪಯೋಗವಾಗಬೇಕು’ ಎಂದು ಸ್ಪಷ್ಟಪಡಿಸಿದರು.

ದೇಶವನ್ನು ನಗದು ರಹಿತ ಆರ್ಥಿಕ ವ್ಯವಸ್ಥೆಯನ್ನಾಗಿ ಬದಲಿಸುವ ಪ್ರಯತ್ನದಲ್ಲಿ ಡಿಜಿಟಲ್, ಮೊಬೈಲ್ ಎಕಾನಮಿಯನ್ನು ಪ್ರೋತ್ಸಾಹಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಮೋದಿ ಮನವಿ ಮಾಡಿದರು.

ನವೆಂಬರ್ 8 ಕ್ಕೂ ಹಿಂದಿನ ಬ್ಯಾಂಕ್ ವಿವರ ಕೇಳಿ: ಕಾಂಗ್ರೆಸ್

ನವೆಂಬರ್ 8 ರಿಂದ ನಡೆದ ಬ್ಯಾಂಕ್ ವ್ಯವಹಾರಗಳನ್ನು ನೀಡುವಂತೆ ಪ್ರಧಾನಿ ತಮ್ಮ ಪಕ್ಷದ ಸಂಸದರಿಗೆ ಸೂಚಿಸಿದ್ದನ್ನು ಕಾಂಗ್ರೆಸ್ ಟೀಕಿಸಿದೆ. ನವೆಂಬರ್ 8 ಕ್ಕೂ ಹಿಂದಿನ ಬ್ಯಾಂಕ್ ವಿವರಗಳನ್ನು ನೀಡಬೇಕು, ಹಾಗೆ ಪ್ರಧಾನಿ ಕೇಳಿದ್ದರೆ ಅವರಿಗೆ ಸಮಸ್ಯೆಯಾಗುತ್ತಿತ್ತು ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್ ನಡೆಸಿರುವ ಭೂವ್ಯವಹಾರಗಳ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಕಪಿಲ್ ಒತ್ತಾಯಿಸಿದರು. ಇನ್ನು ಮೋದಿಯವರೂ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಬಹಿರಂಗ ಪಡಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

Loading...
loading...
error: Content is protected !!