ಗೋವಾದಲ್ಲಿ ಫ್ರೀ ಟಾಕ್ ಟೈಮ್, ಫ್ರೀ ಡೇಟಾ ಸ್ಕೀಮ್ ಯೋಜನೆ

ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಯುವಜನತೆಯನ್ನು ಸೆಳೆಯಲು ಗೋವಾದಲ್ಲಿ ಬಿಜೆಪಿ ಸಮ್ಮಿಶ್ರ ಸರ್ಕಾರ ‘ಫ್ರೀ ಟಾಕ್ ಟೈಮ್, ಫ್ರೀ ಡೇಟಾ’ ಸ್ಕೀಮ್ ಘೋಷಿಸಿದೆ. ದೇಶದಲ್ಲಿಯೇ ಇಂತಹ ಯೋಜನೆ ಜಾರಿಗೆ ತರುತ್ತಿರುವುದು ಇದೇ ಮೊದಲು.

‘ಗೋವಾ ಯುವ ಇನಿಷಿಯೇಟಿವ್ ಸ್ಕೀಮ್’ ಹೆಸರಿನಲ್ಲಿ 100 ನಿಮಿಷಗಳ ಟಾಕ್ ಟೈಮ್, 1 ಜಿಬಿ ಡೇಟಾ(2ಎಂಬಿಪಿಎಸ್ ವೇಗ) ಉಚಿತವಾಗಿ ನೀಡುತ್ತಾರೆ. 1.24 ಲಕ್ಷ ಜನ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಹೇಳಿದ್ದಾರೆ. ಈ ಯೋಜನೆಯಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಒಂದು ಕೋಟಿಯವರೆಗೂ ಹೊರೆ ಬೀಳಲಿದೆ ಎಂದು ಹೇಳಿದರು.

16 ರಿಂದ 30 ವರ್ಷಗಳ ನಡುವಿನ ಯುವಕ/ಯುವತಿಯರು ಈ ಸ್ಕೀಮ್ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ರಾಜ್ಯಾದ್ಯಂತ ಯುವಜನತೆಯನ್ನು ಒಗ್ಗೂಡಿಸಲು, ಸ್ಕಿಲ್ ಡೆವಲಪ್ಮೆಂಟ್ ಗಾಗಿ ಈ ಯೋಜನೆ ಉಪಯೋಗವಾಗಲಿದೆ. ಇದರ ಲಾಭ ಪಡೆಯಲು ಮೊದಲು ಆನ್ಲೈನ್ ನಲ್ಲಿ ಅರ್ಜಿ ಹಾಕಬೇಕಿರುತ್ತದೆ.

ಈ ಮೊಬೈಲ್ ಸೇವೆಯ ಯೋಜನೆ ಜಾರಿಗೆ ರಿಲಯನ್ಸ್ ಜಿಯೋ, ಐಡಿಯಾಗಳೊಂದಿಗೆ ಸ್ಪರ್ಧೆಗೆ ಬಿದ್ದು ತನ್ನ ವಶ ಮಾಡಿಕೊಂಡಿದೆ ವೊಡಾಫೋನ್. ಗೋವಾ ರಾಜ್ಯದಾದ್ಯಂತ 500 ಕ್ಕೂ ಹೆಚ್ಚು ರೀಟೈಲ್ ಔಟ್ಲೆಟ್ ಆರಂಭಿಸಿ, ಇನ್ನು 15 ದಿನಗಳಲ್ಲಿ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಹೇಳಲಾಗಿದೆ.