ಗೋವಾದಲ್ಲಿ ತ್ರಿಕೋನ ಸ್ಪರ್ಧೆ |News Mirchi

ಗೋವಾದಲ್ಲಿ ತ್ರಿಕೋನ ಸ್ಪರ್ಧೆ

ನವದೆಹಲಿ: ಸಣ್ಣ ರಾಜ್ಯವಾದ ಗೋವಾದಲ್ಲಿ ಈ ಬಾರಿಯ ಚುನಾವಣೆ ಕುತೂಹಲಕಾರಿಯಾಗಿ ಇರಲಿದೆ. ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ. ಹೀಗಾಗಿ ಎಲ್ಲರ ಗಮನ ಈಗ ಗೋವಾ ಚುನಾವಣೆಯತ್ತ ಹರಿದಿದೆ.

2012 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ(ಎಂ.ಜಿ.ಪಿ) ಯೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಗೆಲುವಿನ ಪತಾಕೆ ಹಾರಿಸಿತ್ತು. ಆದರೆ ಈಗ ಎರಡು ಪಕ್ಷಗಳ ನಡುವಿನ ಸಂಬಂಧ ಹಳಸಿದೆ. ಹೀಗಾಗಿ ಬಿಜೆಪಿ ಏಕಾಂಗಿಯಾಗಿ ಕಣಕ್ಕೆ ಇಳಿಯುತ್ತಿದೆ.

ವಿಜಯ್ ಸಂಕಲ್ಪ ರ‌್ಯಾಲಿ ಹೆಸರಿನಲ್ಲಿ ಬಿಜೆಪಿ ಬಿರುಸಿನ ಪ್ರಚಾರ ನಡೆಸುತ್ತಿದೆ. ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಉತ್ತಮವಾಗಿದ್ದರೂ, ಮೊನ್ನೆಯವರೆಗೂ ಪಕ್ಷಕ್ಕೆ ಬೆನ್ನೆಲುಬಾಗಿದ್ದ ಆರ್.ಎಸ್.ಎಸ್ ಬಹಿಷ್ಕೃತ ನಾಯಕ ಸುಭಾಷ್ ವೆಲಿಂಗ್‌ಕರ್ ಗೋವಾ ಸುರಕ್ಷಾ ಮಂಚ್(ಜೆಎಸ್ಎಂ) ಹೆಸರಿನಲ್ಲಿ ಪಕ್ಷ ಹುಟ್ಟು ಹಾಕಿದ್ದಾರೆ. ಮತ್ತೊಂದು ಕಡೆ ಎಂಜಿಪಿ ಕೂಡಾ ಮೈತ್ರಿ ಕಡಿದುಕೊಂಡು ಸುಭಾಷ್ ಜೊತೆ ಕೈಜೋಡಿಸಿರುವುದು ನಷ್ಟ ಉಂಟುಮಾಡುತ್ತದೆ ಎಂದು ಬಿಜೆಪಿ ಆತಂಕಗೊಂಡಿದೆ.

ಕಾಂಗ್ರೆಸ್ ಕೂಡಾ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ದೆಹಲಿಯ ನಂತರ ಆಮ್ ಆದ್ಮಿ ಪಕ್ಷ ಇತ್ತೀಚೆಗೆ ಗೋವಾದಲ್ಲಿ ನೆಲೆ ಕಂಡುಕೊಳ್ಳುತ್ತಿದೆ. ಎಲ್ವಿಸ್ ಗೋಮ್ಸ್ ರವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಪ್ ಘೋಷಿಸಿದೆ.

ಕೆಲ ವರ್ಗಗಳ ಜನ ಆಪ್ ಕಡೆ ವಾಲುತ್ತಿರುವುದು ಪ್ರತಿಪಕ್ಷಗಳ ಮತಗಳು ವಿಭಜನೆಯಾಗುತ್ತವೆ ಮತ್ತು ಪುನಃ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಕಾಂಗ್ರೆಸ್ ಅತಂಕ. ಒಟ್ಟಿನಲ್ಲಿ ಈ ಬಾರಿ ಗೋವಾದಲ್ಲಿ ತ್ರಿಕೋನ ಸ್ಪರ್ಧೆ ಇರುವುದಂತೂ ಖಚಿತ. ಫೆಬ್ರವರಿ 4 ರಂದು ಇಲ್ಲಿ ಮತದಾನ ನಡೆಯಲಿದೆ.

Loading...
loading...
error: Content is protected !!