ರೈಲ್ವೇ ಟಿಕೆಟ್ ಸಬ್ಸಿಡಿಗೂ “ಗಿವ್ ಅಪ್” ಯೋಜನೆ, ಇದಕ್ಕೆ ಕಾರಣವಾಗಿದ್ದೇನು ಗೊತ್ತೇ?

ರೈಲ್ವೇ ಪ್ರಯಾಣಿಕರಿಗೆ ತಿಳಿದಿರಲಿ ಎಂದು ರೈಲ್ವೇ ಟಿಕೆಟ್ ಮೇಲೆ ಸರ್ಕಾರ ಭರಿಸುವ ರಿಯಾಯಿತಿ ವಿವರಗಳನ್ನು ಮುದ್ರಿಸುತ್ತಿದೆ. ಆದರೆ ಟಿಕೆಟ್ ಮೇಲೆ ಈ ವಿವರಗಳನ್ನು ಓದಿದ ಫರೀದಾಬಾದ್ ನ ಅವತಾರ್ ಕೃಷ್ಣ ಎಂಬಾತ, ತನಗೆ ರೈಲ್ವೇ ಟಿಕೆಟ್ ಮೇಲೆ ರಿಯಾಯಿತಿ ಬೇಡ ಎಂದು ಹೇಳಿ ರೂ.950 ಚೆಕ್ ನೊಂದಿಗೆ ಐಆರ್ಸಿಟಿಸಿ ಅಧಿಕಾರಿಗಳಿಗೆ ಕಳುಹಿಸಿದ್ದರು. ಈ ಪತ್ರವನ್ನು ಓದಿದ ಅಧಿಕಾರಿಗಳು ನಂತರ ರೈಲ್ವೇ ಸಚಿವ ಸುರೇಶ್ ಪ್ರಭು ಅವರ ಜೊತೆ ಚರ್ಚಿಸಿ ಒಂದು ಹೊಸ ತೀರ್ಮಾನ ಕೈಗೊಂಡರು.

ಈ ಹಿಂದೆ ಅಡುಗೆ ಅನಿಲ ರಿಯಾಯಿತಿಯನ್ನು ಸ್ವಯಂ ಪ್ರೇರಿತರಾಗಿ ಬಿಟ್ಟುಕೊಡಲು ಬಯಸುವವರಿಗೆ ತಂದಿದ್ದ “ಗಿವ್ ಅಪ್” ಯೋಜನೆಯಂತೆಯೇ, ರೈಲ್ವೇ ಟಿಕೆಟ್ ಮೇಲೂ ರಿಯಾಯಿತಿಯನ್ನು ಸ್ವಯಂ ಪ್ರೇರಿತರಾಗಿ ಬಿಟ್ಟುಕೊಡಲು ಬಯಸುವವರಿಗೆ ಅವಕಾಶ ಕೊಟ್ಟು, ಪೂರ್ಣ ಟಿಕೆಟ್ ಮೊತ್ತವನ್ನು ವಸೂಲಿ ಮಾಡುವಂತಹ ಯೋಜನೆಯನ್ನು ಜಾರಿಗೆ ತರಲಿದೆ.

ರೈಲ್ವೇ ಸಚಿವ ಸುರೇಶ್ ಪ್ರಭು ಶೀಘ್ರದಲ್ಲೇ ಇದನ್ನು ಪ್ರಾರಂಭಿಸಲಿದ್ದು, ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗ್ಯಾಸ್ ಸಬ್ಸಿಡಿಯಂತೆಯೇ ಇಲ್ಲಿಯೂ ಅದೇ ಯೋಜನೆ ಜಾರಿಯಾಗುತ್ತದೆ ಎಂದು ಹೇಳಿದ್ದಾರೆ. ಇದರಲ್ಲಿಯೂ ಶೇ.50, ಶೇ.100 ಎಂಬ ಎರಡು ಸ್ಲ್ಯಾಬ್ ಗಳಿರುತ್ತವೆಯಂತೆ. ಸದ್ಯ ರೈಲ್ವೇ ಟಿಕೆಟ್ ಮೇಲೆ ಶೇ.43 ರಷ್ಟು ರಿಯಾಯಿತಿಯನ್ನು ಸರ್ಕಾರವೇ ಭರಿಸುತ್ತಿದೆ. ಇದರಿಂದ ವರ್ಷಕ್ಕೆ ರೂ.30 ಸಾವಿರ ಕೋಟಿ ಹೊರೆ ಸರ್ಕಾರದ ಮೇಲೆ ಬೀಳುತ್ತಿದೆ.

ಹಿರಿಯ ನಾಗರಿಕರು, ಅಂಗವಿಕಲರು, ಮಾಧ್ಯಮ, ರೈಲ್ವೇ ಅಧಿಕಾರಿಗಳು, ಜನಪ್ರತಿನಿಧಿಗಳು ಹೀಗೆ ಹಲವರು ಪ್ರತಿದಿನ ರೈಲುಗಳಲ್ಲಿ ರಿಯಾಯಿತಿಯೊಂದಿಗೆ ಪ್ರಯಾಣಿಸುತ್ತಿದ್ದಾಋಎ. ಆನ್ಲೈನ್ ಬುಕಿಂಗ್ ಕೌಂಟರ್ ನಲ್ಲಿ ಟಿಕೆಟ್ ಬುಕ್ ಮಾಡಿಸಿಕೊಳ್ಳುಬಾಗ ರಿಯಾಯಿತಿ ವಿವರಗಳನ್ನು ಕಾಣಿಸುವಂತೆ ಕ್ರಮ ಕೈಗೊಳ್ಳುತ್ತಾರಂತೆ. ಇದರಿಂದ ರಿಯಾಯಿತಿ ಬೇಡ ಎನ್ನುವವರು ಸ್ವಯಂಪ್ರೇರಿತವಾಗಿ ಪೂರ್ತಿ ಹಣ ಪಾವತಿಸುವ ಅವಕಾಶವಿದೆ.