ಓಟ್ ಬ್ಯಾಂಕ್‌ ಓಲೈಕೆಗಾಗಿ ಸರ್ಕಾರ ಹಿಡಿದ ಸುಲಭ ಮಾರ್ಗ ಟಿಪ್ಪು ಜಯಂತಿ – ಮೋಹನ್ ದಾಸ್ ಪೈ

ವಿರೋಧಗಳ ನಡುವೆಯೂ ವಿವಾದಿತ ಟಿಪ್ಪು ಜಯಂತಿ ಆಚರಿಸಲು ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿದ ತನ್ನ ನಿಲುವಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಬಹುದು ಎಂದುಕೊಂಡಿದ್ದೆ. ಆದರೆ ಶೇ. 90 ಕ್ಕೂ ಹೆಚ್ಚು ಜನ ನನ್ನ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಟಿ.ವಿ ಮೋಹನ್ ದಾಸ್ ಪೈ ಹೇಳಿದ್ದಾರೆ. ಬೆರಳೆಣಿಕೆಯಷ್ಟು ಜನ ವಿರುದ್ಧ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ, ಅಂತಹವರ ಬಗ್ಗೆ ನಾನು ತಲೆ ಕೆಡೆಸಿಕೊಳ್ಳುವುದಿಲ್ಲ. ನಾನೊಬ್ಬ ಸ್ವತಂತ್ರ ವ್ಯಕ್ತಿಯಾಗಿದ್ದು, ರಾಜ್ಯದ ಪ್ರಜೆಯಾಗಿದ್ದು ನನಗೆ ಅನಿಸಿದ್ದನ್ನು ನಾನು ಹೇಳುತ್ತೇನೆ ಎಂದು ಅವರು ಹೇಳಿದರು.

ಟಿಪ್ಪು ಸುಲ್ತಾನ್ ಕೊಡವ ಮುಂತಾದ ವಿವಿಧ ಸಮುಧಾಯಗಳ ಜನರನ್ನು ಹತ್ಯೆ ಮಾಡಿದವನು ಮತ್ತು ಮತಾಂತರ ಮಾಡಿದವನು. ಆತ ದೆವಸ್ಥಾನಗಳನ್ನು ಸುಟ್ಟವನು. ಟಿಪ್ಪು ಒಬ್ಬ ಮುಸ್ಲಿಂ ಮೂಲಭೂತವಾದಿಯಾಗಿದ್ದು ಭಾರತವನ್ನು ಖಲಿಸ್ತಾನ ಮಾಡಲು ಹೊರಟವನು ಎಂದು ದಾಖಲೆಗಳು ಹೇಳುತ್ತವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಇತಿಹಾಸವನ್ನು ತಿಳಿದುಕೊಳ್ಳದೆ ಟಿಪ್ಪು ಜಯಂತಿ ಅಚರಣೆಯಿಂದ ಆಗಬಹುದಾದ ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ ಟಿಪ್ಪು ಜಯಂತಿ ಆಚರಿಸಲು ಮುಂದಾಗುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಹೊಂದಿದ್ದಾರೆ. ಸರ್ಕಾರ ಜ್ಯಾತ್ಯಾತೀತ ಎಂದು ಬಿಂಬಿಸಿಕೊಳ್ಳಲು ಕೋಮು ರಾಜಕಾರಣ ಮಾಡುತ್ತಾ, ಜನರನ್ನು ವಿಭಜಿಸಿ ಕೊಲೆಗಾರನಿಗೆ ಗೌರವ ನೀಡಲು ಹೊರಟಿದೆ. ಸರ್ಕಾರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಮುಸ್ಲಿಮರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಪ್ರಯತ್ನಿಸಬೇಕು. ಆದರೆ ಸರ್ಕಾರ ಓಟ್ ಬ್ಯಾಂಕ್ ಓಲೈಸಲು ಸುಲಭ ದಾರಿಗಳನ್ನು ಹಿಡಿಯುತ್ತಿದೆ ಎಂದು ಆರೋಪಿಸಿದರು.