53 ಸೇವೆಗಳು, 29 ವಸ್ತುಗಳ ಜಿಎಸ್ಟಿ ದರಗಳಲ್ಲಿ ಗಣನೀಯ ಇಳಿಕೆ

ಜಿ.ಎಸ್.ಟಿ ಮಂಡಳಿ ನಡೆಸಿದ 25 ನೇ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಕರಕುಶಲ ವಸ್ತುಗಳ ಮೇಲಿನ ತೆರಿಗೆಯನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಅಷ್ಟೇ ಅಲ್ಲದೆ 29 ರೀತಿಯ ವಸ್ತುಗಳು ಮತ್ತು 53 ಸರಕು ಸೇವೆಗಳ ಮೇಲಿನ ತೆರಿಗೆಯಲ್ಲಿ ಗಣನೀಯವಾಗಿ ಕಡಿತ ಮಾಡಲಾಗಿದೆ. ಸಭೆಯಲ್ಲಿ ಕೈಗೊಂಡ ತೀರ್ಮಾನದ ಕುರಿತು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ತಿಳಿಸಿದ್ದರೆ.

ಸಂಗ್ರಹವಾಗಿರು 35 ಸಾವಿರ ಕೋಟಿ ರೂಪಾಯಿ ತೆರಿಗೆಯನ್ನು ಕೇಂದ್ರ ಮತ್ತು ರಾಜ್ಯಗ ನಡುವೆ ಹಂಚಿಕೆ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. ಜಿಎಸ್ಟಿ ಫೈಲಿಂಗ್ ಸರಳೀಕೃತಗೊಳಿಸುವ ಕುರಿತು ನಂದನ್ ನಿಲೇಕಣಿಯವರು ಕೇಂದ್ರಕ್ಕೆ ವರದಿ ನೀಡಿದ್ದು, ಈ ಕುರಿತು ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಂಡಿಲ್ಲವೆಂದು ಜೇಟ್ಲಿ ಹೇಳಿದ್ದಾರೆ.

ಬಳಸಿದ/ಹಳೆಯ ಮಧ್ಯಮ ಹಾಗೂ ಎಸ್.ಯು.ವಿ ವಾಹನಗಳು, ಜೈವಿಕ ಇಂಧನ ಬಳಸುವ ಸಾರ್ವಜನಿಕ ಸಾರಿಗೆ ಬಸ್ಸುಗಳ ಮೇಲಿನ ಜಿ.ಎಸ್.ಟಿಯನ್ನು ಶೇ.18 ರಿಂದ ಶೇ.12 ಕ್ಕೆ ಇಳಿಸಲಾಗಿದೆ. ಹಳೆಯ ಮಧ್ಯಮ, ದೊಡ್ಡ ಮತ್ತು ಎಸ್.ಯು.ವಿ ಗಳನ್ನು ಹೊರತು ಪಡಿಸಿದ ವಾಹನಗಳ ಮೇಲಿನ ತೆರಿಗೆಯನ್ನು ಶೇ.28 ರಿಂದ 12 ಕ್ಕೆ ಇಳಿಸಲಾಗಿದೆ.

ಸಕ್ಕರೆ ಪದಾರ್ಥಗಳು, ಬಯೋ ಡೀಸೆಲ್, ನೀರಿನ ಕ್ಯಾನ್, ರಸಗೊಬ್ಬರಗಳು, ಹನಿ ನೀರಾವರಿ ವಸ್ತುಗಳ ತೆರೊಗೆಯನ್ನು ಶೇ.18 ರಿಂದ 12 ಕ್ಕೆ ಇಳಿಕೆ ಮಾಡಲಾಗಿದೆ.

ಕೋನ್ ಮೆಹಂದಿ, ಖಾಸಗಿ ಸಂಸ್ಥೆಗಳಿಂದ ಲಭ್ಯವಾಗುವ ಗೃಹೋಪಯೋಗಿ ಎಲ್.ಪಿ.ಜಿ, ಉಪಗ್ರಹ ಮತ್ತು ಉಡಾವಣಾ ವಾಹಕಗಳ ಕಚ್ಚಾ ಉತ್ಪನ್ನಗಳು ಮುಂತಾದವುಗಳ ಮೇಲಿನ ತೆರಿಗೆ ಶೇ.18 ರಿಂದ 5 ಕ್ಕೆ ಇಳಿಸಲಾಗಿದೆ.

ಸಿಗರೇಟ್ ರಾಡ್ ಗಳ ಮೇಲಿಗೆ ತೆರಿಗೆಯನ್ನು ಶೇ.12 ರಿಂದ 18 ಕ್ಕೇರಿಸಲಾಗಿದೆ.

ಇದೇ ಜನವರಿ 25 ರಿಂದ ಹೊಸ ತೆರಿಗೆ ದರಗಳು ಜಾತಿಗೆ ಬರಲಿವೆ. ಮುಂದಿನ ಜಿ.ಎಸ್.ಟಿ ಸಭೆಯಲ್ಲಿ ಕಚ್ಚಾ ತೈಲ, ನೈಸರ್ಗಿಕ ಅನಿಲ, ಪೆಟ್ರೋಲ್ ಡೀಸೆಲ್, ರಿಯಲ್ ಎಸ್ಟೇಟ್ ಮೇಲಿನ ತೆರಿಗೆ ದರಗಳ ಕುರಿತು ಪರಿಶಿಲನೆ ನಡೆಸುವುದಾಗಿ ಹೇಳಿದ ಸಚಿವರು, ಸಭೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಹೇಳಿದ್ದಾರೆ.