ಗುರ್ಮೀತ್ ಆಶ್ರಮದಲ್ಲಿ ಅಕ್ರಮ ಗರ್ಭಪಾತ ಕೇಂದ್ರಗಳು!

ಡೇರಾ ಸಚ್ಚಾ ಸೌದಾ ಹೆಸರಿನಲ್ಲಿ ತನ್ನದೇ ಆದ ಪ್ರತ್ಯೇಕ ಜಗತ್ತನ್ನು ಸೃಷ್ಟಿಸಿಕೊಂಡಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅಕ್ರಮ ಚಟುವಟಿಕೆಗಳ ಕುರಿತು ಒಂದೊಂದೇ ರಹಸ್ಯ ಬೆಳಕಿಗೆ ಬರುತ್ತಿದೆ. ಪ್ಲಾಸ್ಟಿಕ್ ಕರೆನ್ಸಿ, ಸಿನಿಮಾ ಚಿತ್ರೀಕರಣಕ್ಕಾಗಿ ವಿಶೇಷ ಸೆಟ್ ಗಳು, ವಿಶೇಷ ಶಸ್ತ್ರಾಗಾರ, ಹೀಗೆ ಎಲ್ಲಾ ನಿರ್ಮಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಶಿಷ್ಯೆಯರನ್ನು ಭೇಟಿ ಮಾಡಲು ತನ್ನ ನಿವಾಸದಿಂದ 5 ಕಿಮೀ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಿಕೊಂಡಿದ್ದಾರೆ.

ಕೋರ್ಟ್ ಸೂಚನೆಯಂತೆ ನಡೆದಿರುವ ಶೋಧ ಕಾರ್ಯಚರಣೆಯಲ್ಲಿ ಡೇರಾದಲ್ಲಿ ಹುಬ್ಬೇರಿಸುವಂತಹ ವಿಷಯಗಳು ಬೆಳಕಿಗೆ ಬರುತ್ತಿವೆ. ಆಶ್ರಮದಲ್ಲಿ ಗರ್ಭಪಾತ ಕೇಂದ್ರಗಳನ್ನೂ ಸ್ಥಾಪಿಸಿರುವುದಾಗಿ ತಿಳಿದು ಬಂದಿದೆ. ಸಾಧ್ವಿಗಳನ್ನು ವಶಪಡಿಸಿಕೊಳ್ಳುವುದು, ಒಪ್ಪದವರನ್ನು ಕೊಲ್ಲುವುದು ಅಲ್ಲಿ ಸಾಮಾನ್ಯ ಎಂಬ ಮಾತುಗಳು ಕೇಳಿಬರುತ್ತಿವೆ. ಅವರು ಗರ್ಭ ಧರಿಸಿದರೆ ಗರ್ಭಪಾತ ಮಾಡಲು ವಿಶೇಷ ಗರ್ಭಪಾತ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. [ಇದನ್ನೂ ಓದಿ: ಗುರ್ಮೀತ್ ನಿವಾಸದಿಂದ ಶಿಷ್ಯೆಯರ ಹಾಸ್ಟೆಲ್ ಗೆ ರಹಸ್ಯ ಸುರಂಗ ಮಾರ್ಗ!]

ಸರ್ಕಾರದಿಂದ ಅನುಮತಿ ಪಡೆಯದೆ ಆಶ್ರಮದ ಒಳಗೆ ಹಲವು ಕ್ರೂರ ಮೃಗಗಳನ್ನು ಸಾಕಲಾಗುತ್ತಿದೆ ಎಂಬುದನ್ನು ಶೋಧ ಕೈಗೊಂಡಿರುವ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ತನ್ನ ವಿರುದ್ಧ ತೀರ್ಪು ಬರುವ ಎರಡು ವಾರಗಳ ಮುಂಚೆಯೇ ಹರಿಯಾಣ, ದೆಹಲಿಯಲ್ಲಿ ವಿಧ್ವಂಸಕ ಕೃತ್ಯಗಳನ್ನೆಸಗಲು ಯೋಜನೆ ರೂಪಿಸಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ. ಗರ್ಭಪಾತ ಕೇಂದ್ರಗಳನ್ನು, ಕ್ರೂರ ಮೃಗಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.