ಅನ್ಯಗ್ರಹ ಜೀವಿಗಳನ್ನು ಪತ್ತೆ ಹಚ್ಚಿದೆಯಾ ನಾಸಾ?

ಅನ್ಯಗ್ರಹ ಜೀವಿಗಳು ಇವೆ ಎಂದು ಅಮೆರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಪತ್ತೆ ಹಚ್ಚಿದೆಯಾ? ಎರಡು ಮೂರು ದಿನಗಳಿದ ಇಂತಹ ಸುದ್ದಿ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಅನ್ಯಗ್ರಹ ಜೀವಿಗಳು ಪತ್ತೆ ಮಾಡಿದಂತೆ ನಾಸಾ ಹಿರಿಯ ಅಧಿಕಾರಿಯೊಬ್ಬರು ಅಮೆರಿಕ ಸಂಸತ್ತಿಗೆ ಹೇಳಿಕೆ ನೀಡಿದ್ದಾಗಿ ಯೂಟ್ಯೂಬ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಇರುವ ವೀಡಿಯೋ ಹರಿದಾಡುತ್ತಿದೆ. ಆ ಹಿರಿಯ ಅಧಿಕಾರಿ ಹೆಸರು ಥಾಮಸ್ ಜುರ್ಬುಚೆನ್ ಎಂದು, ಎರಡು ತಿಂಗಳ ಹಿಂದೆ ಅಮೆರಿಕದ ಸಂಸತ್ತಿಗೆ ಒಂದು ಹೇಳಿಕೆ ನೀಡಿದ್ದಾರೆ ಎಂದು ವೀಡಿಯೋದಲ್ಲಿ ಹೇಳಲಾಗಿದೆ.

ಅನ್ಯಗ್ರಹಗಳಲ್ಲಿ ಜೀವಿಗಳ ಇರುವಿಕೆಯನ್ನು ಖಚಿತಪಡಿಸುವ ವಿಷಯದಲ್ಲಿ ಇದುವರೆಗೂ ಮನುಷ್ಯರು ಮಾಡಿದ ಪ್ರಯತ್ನಗಳು, ಪ್ರಯೋಗಗಳನ್ನು ಗಮನದಲ್ಲಿಟ್ಟುಕೊಂಡು ತಾವು ಈ ನಿರ್ಧಾರಕ್ಕೆ ಬಂದಿದ್ದಾಗಿ ಥಾಮಸ್ ಹೇಳಿದ್ದಾರೆ ಎಂದು ವೀಡಿಯೋ ಹೇಳುತ್ತದೆ. ಶನಿ ಗ್ರಹದ ಉಪಗ್ರಗಳಲ್ಲಿ ಒಂದರ ಮೇಲೆ ಆಮ್ಲಜನಕ ಇದೆ ಎಂದು ನಾಸಾ ಇತ್ತೀಚೆಗೆ ಪತ್ತೆ ಹಚ್ಚಿದ್ದು, ಗುರು ಗ್ರಹದ ಉಪಗ್ರಹವಾದ ಯೂರೋಪಾ ಮೇಲೆ ಸಮುದ್ರಗಳಿವೆ ಎಂಬ ಊಹೆಗೆ ಬಲಗೊಂಡಿದ್ದು, ಕೆಪ್ಲರ್ ಟೆಲಿಸ್ಕೋಪ್ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ನಡೆದ ವಿಶ್ಲೇಷಣೆಯಿಂದ 219 ಹೊಸ ಎಕ್ಸೋಪ್ಲಾನೆಟ್ ಗಳನ್ನು ಪತ್ತೆ ಹಚ್ಚಿರುವುದು ಮುಂತಾದವುಗಳನ್ನು ಈ ವೀಡಿಯೋದಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇತರೆ ಗ್ರಹಗಳ ಮೇಲೆ ಜೀವಿಗಳಿರುವ ಅವಕಾಶಗಳು ಹೆಚ್ಚಾಗಿವೆ ಎಂದು ಹೇಳುತ್ತಿದ್ದಾರೆ. ಈ ವೀಡಿಯೋ ಹಾಕಿರುವಾತನ ಯೂಟ್ಯೂಬ್ ಅಕೌಂಟ್ ಒಬ್ಬ ಹ್ಯಾಕರ್ ಗೆ ಸೇರಿದ್ದು ಎಂಬುದು ಗಮನಾರ್ಹ.

ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಥಾಮಸ್ ಜರ್ಬುಚೆನ್, ಭ್ಯೂಮ್ಯತೀತ ಜೀವಿಗಳಿಗೆ ಸಂಬಂಧಿಸಿದಂತೆ ನಾಸಾದಿಂದ ಯಾವುದೇ ಘೋಷಣೆಗಳು ಬಾಕಿ ಇಲ್ಲ. ಬ್ರಹ್ಮಾಂಡದಲ್ಲಿ ನಾವು ಮಾತ್ರವಿದ್ದೇವೆಯೇ ಎಂಬುದರ ಕುರಿತು ನಮಗೆ ಇನ್ನೂ ತಿಳಿದಿಲ್ಲ. ಅನ್ಯಗ್ರಹ ಜೀವಿಗಳ ಅಸ್ತಿತ್ವದ ಬಗ್ಗೆ ತಿಳಿಯಲು ಪ್ರಯತ್ನಗಳು ಮುಂದುವರೆಯಲಿವೆ ಎಂದು ಹೇಳಿದ್ದಾರೆ.