ಹಾರ್ಧಿಕ್ ಹಾರಾಟಕ್ಕೆ ಬ್ರೇಕ್ ಹಾಕಿದ ಮೋದಿ? – News Mirchi

ಹಾರ್ಧಿಕ್ ಹಾರಾಟಕ್ಕೆ ಬ್ರೇಕ್ ಹಾಕಿದ ಮೋದಿ?

ಪ್ರಧಾನಿ ನರೇಂದ್ರ ಮೋದಿಯವರಿಗೆ ನೇರವಾಗಿ ಸವಾಲೆಸೆಯಲು ದೊಡ್ಡ ದೊಡ್ಡ ನಾಯಕರೇ ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲಿ ಮೀಸಲಾತಿ ಬೇಡಿಕೆ ನೆಪದಲ್ಲಿ ಮೋದಿ ವಿರುದ್ಧ ತೊಡೆ ತಟ್ಟಲು ಮುಂದಾಗಿದ್ದರು ಹಾರ್ಧಿಕ್ ಪಟೇಲ್. ಒಂದು ಹಂತದಲ್ಲಿ ಮೋದಿಯವರಿಗೆ ತಲೆನೋವಾಗಿಯೂ ಪರಿಣಮಿಸಿದ್ದ ಹಾರ್ಧಿಕ್ ಪಟೇಲ್, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮೋದಿಗೆ ಶಾಕ್ ನೀಡುತ್ತಾರೆ ಎಂದು ಹಲವರು ಭಾವಿಸಿದ್ದರು. ಈ ವಿಷಯದಲ್ಲಿ ಹಾರ್ಧಿಕ್ ಪಟೇಲ್ ಮೇಲೆ ಹಲವು ನಾಯಕರು ಭರವಸೆಯನ್ನೂ ಇಟ್ಟುಕೊಂಡಿದ್ದರು. ಆದರೆ ಎಷ್ಟು ಹಾರ್ಧಿಕ್ ಪಟೇಲ್ ಗಳು ಬಂದರೂ ಅವರನ್ನು ಎದುರಿಸುವ ಸಾಮರ್ಥ್ಯ ತನಗಿದೆ ಎಂದು ಮೋದಿಯವರು ಮತ್ತೆ ಸಾಬೀತು ಮಾಡಿ ಹಾರ್ಧಿಕ್ ಆಟಗಳಿಗೆ ಬ್ರೇಕ್ ಹಾಕಿದ್ದಾರೆ.

ಗುಜರಾತ್ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಹಾರ್ಧಿಕ್ ಪಟೇಲ್ ಆಪ್ತವಲಯದಲ್ಲಿ ಪ್ರಮುಖರೆಂದೇ ಹೇಳಲಾಗುತ್ತಿದ್ದ ವರುಣ್ ಪಟೇಲ್ ಮತ್ತು ರೇಷ್ಮಾ ಪಟೇಲ್ ಅವರನ್ನು ಬಿಜೆಪಿ ಸೆಳೆದಿದೆ. ಬಿಜೆಪಿ ಸೇರ್ಪಡೆಯಾಗುವುದಾಗಿ ಪ್ರಕಟಿಸಿದ ಈ ಇಬ್ಬರೂ ನಾಯಕರು ಹಾರ್ಧಿಕ್ ಗೆ ಭಾರೀ ಶಾಕ್ ನೀಡಿದ್ದಾರೆ. ಹಾರ್ಧಿಕ್ ಪಟೇಲ್ ನಿರ್ವಹಿಸುತ್ತಿರುವ ಪಟೀದಾರ್ ಆಂದೋಲನ್ ಸಮಿತಿಯಲ್ಲಿ ಪ್ರಮುಖ ನಾಯಕರಾಗಿರುವ ಈ ಇಬ್ಬರ, ಯಾರೂ ನಿರೀಕ್ಷಿಸದ ತೀರ್ಮಾನ ಕೈಗೊಂಡಿದ್ದು, ಕೇಸರಿ ಪಕ್ಷ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರೊಂದಿಗೆ ಭೇಟಿಯಾದ ಇಬ್ಬರೂ ನಾಯಕರು, ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಜೀತು ನೇತೃತ್ವದಲ್ಲಿ ಮಾಧ್ಯಮಗಳ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲು ಉತ್ಸುಕರಾಗಿದ್ದಾರೆ. ಇದು ಹಾರ್ಧಿಕ್ ಪಟೇಲ್ ಭಾರೀ ಹೊಡೆತ ಎಂದೇ ಬಣ್ಣಿಸಲಾಗುತ್ತಿದೆ.

ಗುಜರಾತ್ ನಲ್ಲಿ 182 ವಿಧಾನಸಭೆ ಕ್ಷೇತ್ರಗಳಿದ್ದು, 58 ಕ್ಷೇತ್ರಗಳಲ್ಲಿ ಪಟೇಲ್ ಸಮುದಾಯ ನಿರ್ಣಾಯಕವಾಗಿದೆ. ಹೀಗಾಗಿ ಪಟೇಲ್ ಸಮುದಾಯದ ಮೀಸಲಾತಿ ಬೇಡಿಕೆಯ ಆಕ್ರೋಶವನ್ನು ಬಿಜೆಪಿ ವಿರುದ್ಧ ಬಳಸಲು ಕಾಂಗ್ರೆಸ್ ಮುಂದಾಗಿತ್ತು.

ಬಿಜೆಪಿ ಸೇರ್ಪಡೆಯಾಗಲಿರುವ ವರುಣ್ ಪಟೇಲ್, ರೇಷ್ಮಾ ಪಟೇಲ್ ಹಾರ್ಧಿಕ್ ವಿರುದ್ಧ ತೀವ್ರ ಟೀಕೆಗಳನ್ನು ಮಾಡಲು ಆರಂಭಿಸಿದ್ದಾರೆ. ಹಾರ್ಧಿಕ್ ಪಟೇಲ್ ಕಾಂಗ್ರೆಸ್ ಪಕ್ಷಕ್ಕೆ ಏಜೆಂಟ್ ನಂತೆ ವರ್ತಿಸುತ್ತಿದ್ದಾರೆ. ಚಳುವಳಿ ಹೆಸರಿನಲ್ಲಿ ಆಡಳಿತ ವಿರೋಧಿ ಚಟುವಟಿಕೆಗಳಿಗೆ ಮುಂದಾಗುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಪಟೇಲ್ ಸಮುದಾಯವನ್ನು ಹಿಂದುಳಿದ ವರ್ಗ ಕೋಟಾಗೆ ಸೇರಿಸುವುದೇ ತಮ್ಮ ಗುರಿ ಎಂದು ಅವರು ಸ್ಪಷ್ಟಪಡಿಸಿದರು. ಇಂದು(ಭಾನುವಾರ) ಬಿಜೆಪಿಯಲ್ಲಿ ಸೇರುತ್ತಿರುವುದಾಗಿ ಅವರು ಪ್ರಕಟಿಸಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...