ಆ ಸಿಡಿಯಲ್ಲಿರುವುದು ಖಚಿತವಾಗಿ ಹಾರ್ಧಿಕ್ ಪಟೇಲ್ – News Mirchi

ಆ ಸಿಡಿಯಲ್ಲಿರುವುದು ಖಚಿತವಾಗಿ ಹಾರ್ಧಿಕ್ ಪಟೇಲ್

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟೀದಾರ್ ಚಳುವಳಿ ನಾಯಕ ಹಾರ್ಧಿಕ್ ಪಟೇಲ್ ಸೆಕ್ಸ್ ವೀಡಿಯೋ ಕ್ಲಿಪ್ ಬಹಿರಂಗವಾಗಿರುವುದು ಸಂಚಲನ ಮೂಡಿಸಿದೆ. ಈ ವೀಡಿಯೋ ಕ್ಲಿಪ್ ನಲ್ಲಿರುವುದು ತಾನಲ್ಲ ಎಂದು ಹಾರ್ಧಿಕ್ ಪಟೇಲ್ ಹೇಳುತ್ತಿದ್ದರೂ, ಈ ವಿವಾದ ಮತ್ತಷ್ಟು ಹೆಚ್ಚಾಗುತ್ತಿದೆ.

ಈ ಸಿಡಿಯಲ್ಲಿರುವುದು ಖಚಿತವಾಗಿ ಹಾರ್ಧಿಕ್ ಪಟೇಲ್ ಎಂದು ಆತನ ಮಾಜಿ ಬೆಂಬಲಿಗ ಅಶ್ವಿನ್ ಹೇಳಿಕೆ ನೀಡಿದ್ದಾರೆ. ಈ ಸೆಕ್ಸ್ ಸಿಡಿ ವಿಷಯದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅಶ್ವಿನ್, ಈ ಸಿಡಿಯಲ್ಲಿರುವುದು ಹಾರ್ಧಿಕ್ ಪಟೇಲ್, ಶೀಘ್ರದಲ್ಲಿಯೇ ಆತನಿಗೆ ಸಂಬಂಧಿಸಿದ ಮತ್ತಷ್ಟು ವೀಡಿಯೋಗಳನ್ನು ಬಹಿರಂಗಪಡಿಸುವುದಾಗಿ ಎಚ್ಚರಿಸಿದ್ದಾರೆ. ಹಾರ್ಧಿಕ್ ಗೆ ಒಂದು ಗತಿ ಕಾಣಿಸುತ್ತೇನೆ ಎಂದು ಅಶ್ವಿನ್ ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ ಹಾರ್ಧಿಕ್ ಪಟೇಲ್ ಬೆಂಬಲಿಗರೆಲ್ಲಾ ಸೇರಿ ಮದ್ಯ ಸೇವಿಸುತ್ತಿರುವ ವೀಡಿಯೋ ಕೂಡಾ ಇದೀಗ ಬಹಿರಂಗವಾಗಿದೆ.

ಹೋಟೆಲಿನ ಕೊಠಡಿಯೊಂದರಲ್ಲಿ ಯುವತಿಯೊಬ್ಬರೊಂದಿಗೆ ಇರುವ ವೀಡಿಯೋ ಬಹಿರಂಗವಾದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಹಾರ್ಧಿಕ್ ಪಟೇಲ್, ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿಯೇ ತನಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು. ಈ ವಿಷಯದ ಕುರಿತು ದಲಿತ ಯುವ ಮುಖಂಡ ಜಿಗ್ನೇಶ್ ಮೇವಾನಿ ಕೂಡಾ ಪ್ರತಿಕ್ರಿಯಿಸಿದ್ದು, ಹಾರ್ಧಿಕ್ ನಾಚಿಕೆ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಹಾರ್ಧಿಕ್ ನಿನಗೆ ನನ್ನ ಬೆಂಬಲವಿದೆ, ಶೃಂಗಾರವೆನ್ನುವುದು ಪ್ರಾಥಮಿಕ ಹಕ್ಕು, ಇದಕ್ಕೆ ಧಕ್ಕೆ ತರುವ ಹಕ್ಕು ಯಾರಿಗೂ ಇಲ್ಲ ಎಂದು ಮೇವಾನಿ ಟ್ವೀಟ್ ಮಾಡಿದ್ದಾರೆ. ನಂತರ ರಾಷ್ಟ್ರೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಮೇವಾನಿ, ವೀಡಿಯೋದಲ್ಲಿರುವುದು ಹಾರ್ಧಿಕ್ ಪಟೇಲ್ ಆದರೂ ಅದು ತಪ್ಪಲ್ಲ. ಆ ವೀಡಿಯೋವನ್ನು ಯಾರು ಬಹಿರಂಗಪಡಿಸಿದ್ದಾರೋ, ಅವರನ್ನು ಹಾರ್ಧಿಕ್ ಪಟೇಲ್ ಕೋರ್ಟ್ ಗೆ ಎಳೆದು ತರಬೇಕು ಎಂದು ಸಲಹೆ ನೀಡಿದ್ದಾರೆ.

Get Latest updates on WhatsApp. Send ‘Add Me’ to 8550851559

Click for More Interesting News

Loading...
error: Content is protected !!