ಗುರ್ಮೀತ್ ಸಿಂಗ್ ಲೈಂಗಿಕ ಕಿರುಕುಳ ಪ್ರಕರಣ ತೀರ್ಪು: ಹರಿಯಾಣ, ಪಂಜಾಬ್ ಗಳಲ್ಲಿ ಹೈ ಅಲರ್ಟ್

ವಿವಾದಿತ ಆಧ್ಯಾತ್ಮಿಕ ಗುರು ಡೇರಾ ಸಚ್ಚಾ ಸೌದಾ ಸಮುದಾಯದ ಧರ್ಮಗುರು ಹಾಗೂ ರಾಕ್ ಸ್ಟಾರ್ ಎಂದೇ ಹೆಸರುವಾಸಿಯಾಗಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಮೇಲೆ ದಾಖಲಾದ ಲೈಂಗಿಕ ಕಿರಕುಳ ಪ್ರಕರಣದಲ್ಲಿ ಸಿಬಿಐ ಕೋರ್ಟ್ ಶುಕ್ರವಾರ ತೀರ್ಪು ನೀಡಲಿದೆ. ಈ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಅವರ ಬೆಂಬಲಿಗರು ಪಂಚಕುಲಕ್ಕೆ ಬರಲಿದ್ದಾರೆ. ಹೀಗಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಿ. ಎರಡೂ ರಾಜ್ಯಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ.

ಶುಕ್ರವಾರ ನ್ಯಾಯಾಲಯದಲ್ಲಿ ಹಾಜರಾಗಲಿರುವ ಗುರ್ಮೀತ್ ಸಿಂಗ್ ಅವರಿಗೆ ಬೆಂಬಲ ಸೂಚಿಸಲು ಈಗಾಗಲೇ 35 ಸಾವಿರ ಜನ ಗುರ್ಮೀತ್ ಬೆಂಬಲಿಗರು ಪಂಚಕುಲ “ನಾಮ್ ಚರ್ಚಾ ಘರ್” ಪ್ರಾರ್ಥನಾ ಮಂದಿರ ತಲುಪಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ಸಂಖ್ಯೆ ಒಂದು ಲಕ್ಷ ಮೀರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಭಾರೀ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸಾವಿರಾರು ಸಂಖ್ಯೆಯಲ್ಲಿ ಪೊಲೀಸರು, ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರ ಮತ್ತು ಶುಕ್ರವಾರಗಳಂದು ಪಂಚಕುಲದಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪಂಚಕುಲದಲ್ಲಿನ ಜಿಲ್ಲಾ ನ್ಯಾಯಾಲಯಕ್ಕೆ ಹೋಗುವ ಎಲ್ಲಾ ಮಾರ್ಗಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸುತ್ತಿದ್ದಾರೆ. ತೀರ್ಪು ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇದೆ ಎಂದು ನಿಗಾ ಮೂಲಗಳು ಎಚ್ಚರಿಸಿವೆ. ಪಂಜಾಬ್ ಗೆ ಈಗಾಗಲೇ 75 ಕಂಪನಿಗಳ ಕೇಂದ್ರ ಪಡೆಗಳು ತಲುಪಿವೆ. ಅಹಿತಕರ ಘಟನೆಗಳು ನಡೆಯದಂತೆ ಡ್ರೋನ್ ಗಳ ಸಹಾಯದಿಂದ ಪರಿಸ್ಥಿತಿಗಳನ್ನು ಪರಿಶೀಲಿಸುತ್ತಿದ್ದಾರೆ.

ಚಂಡೀಘಡದ ಕ್ರಿಕೆಟ್ ಕ್ರೀಡಾಂಗಣವನ್ನು ತಾತ್ಕಾಲಿಕ ಜೈಲಾಗಿ ಪರಿವರ್ತಿಸಲಾಗಿದೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆಂದು ಅನುಮಾನ ಬಂದವರನ್ನೆಲ್ಲಾ ಶುಕ್ರವಾರ ಆ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಡಲು ತೀರ್ಮಾನಿಸಲಾಗಿದೆ. 2002 ರಲ್ಲಿ ಇಬ್ಬರು ಶಿಷ್ಯೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳು ಗುರ್ಮೀತ್ ರಾಮ್ ಹೀಮ್ ಸಿಂಗ್ ಮೇಲಿವೆ.

[ಇದನ್ನೂ ಓದಿ:ಜೈಲಿನಿಂದ ಶಾಸಕನ ಮನೆಗೆ ಹೋಗಿ ಬರುತ್ತಿದ್ದ ಶಶಿಕಲಾ: ರೂಪಾರವರ ಮತ್ತೊಂದು ಬಾಂಬ್]