Rohini Sindhuri

ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದ ಸಿಎಂ, ಹಾಸನ ಜಿಲ್ಲಾಧಿಕಾರಿ ಎತ್ತಂಗಡಿ

ಪ್ರಾಮಾಣಿಕ ಅಧಿಕಾರಿಗಳ ವಿಷಯದಲ್ಲಿ ಸದಾ ವಿವಾದಕ್ಕೀಡಾಗುತ್ತಿರುವ ರಾಜ್ಯ ಸರ್ಕಾರ, ಇದೀಗ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ(ಕೆಎಸ್ಐಐಡಿಸಿ)ಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ರೋಹಿಣಿ ಸೇರಿದಂತೆ 6 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ಕಾಂಗ್ರೆಸ್ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್ಗಾವಣೆ ಆದೇಶ ಹೊರಡಿಸಿರುವುದು ಪ್ರಾಮಾಣಿಕ ಅಧಿಕಾರಿಗಳ ವಿಷಯದಲ್ಲಿ ಸರ್ಕಾರ ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

Rohini Sindhuri

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂದು ಇತ್ತೀಚೆಗೆ ಹಾಸನ ಜಿಲ್ಲೆಯ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದರು. ರೋಹಿಣಿಯವರನ್ನು ವರ್ಗಾವಣೆ ಮಾಡದಿದ್ದ ಪಕ್ಷದಲ್ಲಿ ರಾಜೀನಾಮೆ ನೀಡಲೂ ಸಿದ್ಧ ಎಂದು ಹೇಳುವ ಕೈ ಮುಖಂಡರು ಸಿಎಂ ಮೇಲೆ ಒತ್ತಡ ತಂದಿದ್ದರು. ನಂತರ ಅಧಿಕಾರಿಗೆ ಮುಖ್ಯಮಂತ್ರಿಗಳು ಎಚ್ಚರಿಕೆಯನ್ನೂ ನೀಡಿ, ಅಧಿಕಾರಿಯನ್ನು ವರ್ಗಾವಣೆ ಮಾಡುವುದಾಗಿ ಪಕ್ಷದ ಕಾರ್ಯಕರ್ತರಿಗೆ ಭರವಸೆ ನೀಡಿದ್ದರೆನ್ನಲಾಗಿತ್ತು.

Rohini Sindhuri

ಮಹಾಮಸ್ತಕಾಭಿಷೇಕಕ್ಕೆ ನಡೆಸಿದ್ದರು ಸಿದ್ಧತೆ

ಫೆಬ್ರವರಿಯಲ್ಲಿ ಶ್ರವಣಬೆಳಗೊಳದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕಕ್ಕೆ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಸಿದ್ಧತೆ ನಡೆಸಿದ್ದರು. ಬಿಡುಗಡೆಯಾಗಿರುವ ರೂ. 174 ಕೋಟಿ ಹಣ ದುರ್ಬಳಕೆಯಾಗದಂತೆ ಅವರು ತಡೆದಿದ್ದರು. ಹಾಸನ ಜಿಲ್ಲಾಧಿಕಾರಿಯಾಗಿ ಜನರ ಮೆಚ್ಚುಗೆ ಗಳಿಸಿದ್ದ ಅವರನ್ನು ಮಹಾಮಸ್ತಕಾಭಿಷೇಕ ನಡೆಯಲಿರುವ ಸಂದರ್ಭದಲ್ಲಿ ವರ್ಗಾವಣೆ ಮಾಡಲಾಗಿದೆ. ಹಾಸನ ಜಿಲ್ಲಾಧಿಕಾರಿಯನ್ನಾಗಿ ಡಾ.ಎಂ.ವಿ.ವೆಂಕಟೇಶ್ ಅವರನ್ನು ನೇಮಕ ಮಾಡಲಾಗಿದೆ.

Get Latest updates on WhatsApp. Send ‘Subscribe’ to 8550851559