ರಾಷ್ಟ್ರಪತಿ ಅಭ್ಯರ್ಥಿ: ರಾಮನಾಥ್ ಆಯ್ಕೆಗೆ ಪ್ರಮುಖ ಕಾರಣಗಳು

ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಮುಂತಾದ ಹಿರಿಯ ನಾಯಕರನ್ನೂ ಕಡೆಗಣಿಸಿ ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಅವರನ್ನು ಎನ್.ಡಿ.ಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಗೊತ್ತೇ ಇದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸಚಿವ ತಾವರ್ ಚಂದ್ ಗೆಹ್ಲೋಟ್ ಮತ್ತು ಲೋಕಸಭಾ ಸ್ಪೀಕರ್ ಸುಮಿತ್ರಾ ಮಜಾಜನ್ ಹೆಸರುಗಳೂ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಚರ್ಚೆಯಲ್ಲಿದ್ದವು.

ಹಲವು ಅಭ್ಯರ್ಥಿಗಳ ಹೆಸರುಗಳ ಪಟ್ಟಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರವೇ ರಾಮನಾಥ್ ಕೋವಿಂದ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಮನಾಥ್ ಅವರನ್ನೇ ಬಿಜೆಪಿ ಆಯ್ಕೆ ಮಾಡಲು ಇಲ್ಲಿವೆ ಕೆಲವು ಕಾರಣಗಳು…

ರಾಮನಾಥ್ ಕೋವಿಂದ್ ರವರನ್ನು ಆಯ್ಕೆ ಮಾಡುವ ಮೂಲಕ, ದಲಿತರನ್ನು ಪಕ್ಷದ ಕಡೆ ಸೆಳೆಯುವ ಪ್ರಯತ್ನ. ದೇಶದ ಅತ್ಯುನ್ನತ ಹುದ್ದೆಗೆ ದಲಿತ ನಾಯಕನನ್ನು ಆಯ್ಕೆ ಮಾಡಿದ್ದನ್ನು ಪ್ರಚಾರ ಮಾಡಿ ಬಿಜೆಪಿ ಮತ್ತು ಆರ್.ಎಸ್.ಎಸ್, ತಾವು ದಲಿತ ಪರ ಎಂದು ದಲಿತರಲ್ಲಿ ವಿಶ್ವಾಸ ಮೂಡಿಸಿದ ಹಾಗಾಗುತ್ತದೆ.

ದಲಿತ ಸಮುದಾಯದ ನಾಯಕನನ್ನು ಆಯ್ಕೆ ಮಾಡಿದರೆ ರಾಷ್ಟ್ರಪತಿ ಹುದ್ದೆಗೆ ಪ್ರಬಲ ಆಕಾಂಕ್ಷಿಗಳಾಗಿದ್ದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ವಿರೋಧ ವ್ಯಕ್ತಪಡಿಸದೇ ಇರಬಹುದು ಎಂಬ ಲೆಕ್ಕಾಚಾರ. 2014ರಲ್ಲಿ ಸಚಿವ ಸ್ಥಾನ ವಂಚಿತರಾದಾಗ ಇದೇ ಇಬ್ಬರು ನಾಯಕರನ್ನು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳಿಗೆ ಪರಿಗಣಿಸಲಾಗುತ್ತದೆ ಎನ್ನಲಾಗುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಪಕ್ಷದಲ್ಲಿ ಅವರನ್ನು ಕಡೆಗಣಿಸಲಾಯಿತು.

ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟದ ಬಳಿ ಸಾಕಷ್ಟು ಸಂಸದರು ಮತ್ತು ಶಾಸಕರ ಬಲವಿದ್ದು, ಬಹುತಕ್ಕೆ ತುಂಬಾ ಕಡಿಮೆ ಪ್ರಮಾಣದ ಮತಗಳ ಕೊರತೆಯಾಗಬಹುದು. ಬಿಜೆಪಿಯನ್ನು ವಿರೋಧಿಸುವ ಪಕ್ಷಗಳೆಲ್ಲಾ ಒಂದಾಗಿ ತಮ್ಮ ಅಭ್ಯರ್ಥಿಯನ್ನು ನಿಲ್ಲಿಸಲು ರಣತಂತ್ರ ರೂಪಿಸುತ್ತಿದ್ದರೆ. ಇತ್ತ ಬಿಜೆಪಿ ಯಾರಿಗೂ ಸುಳಿವೇ ನೀಡದೇ ಯಾರೂ ನಿರೀಕ್ಷಿಸದ ದಲಿತ ಸಮುದಾಯದ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಘೋಷಿಸಿ ಅಚ್ಚರಿ ಮೂಡಿಸಿದೆ. ದಲಿತ ವ್ಯಕ್ತಿ ರಾಷ್ಟ್ರಪತಿಯಾಗುವುದನ್ನು ವಿರೋಧಿಸಿದರೆ ದಲಿತ ವಿರೋಧಿ ಹಣೆಪಟ್ಟಿ ಕಟ್ಟಿಕೊಳ್ಳುವ ಭಯದಿಂದ ಕೆಲವು ಪಕ್ಷಗಳು ತಮ್ಮ ನಿಲುವು ಬದಲಿಸಿ ಬೆಂಬಲಿಸಲೂ ಬಹುದು. ಹೀಗಾಗಿ ವಿರೋಧ ಪಕ್ಷಗಳ ಒಗ್ಗಟ್ಟನ್ನು ಮುರಿಯಲು ಈ ಆಯ್ಕೆ ಸಹಜವಾಗಿ ಕೆಲಸ ಮಾಡುತ್ತದೆ. ರಾಮನಾಥ್ ಕೋವಿಂದ್ ಅವರ ಆಯ್ಕೆಗೆ ತೆಲಂಗಾಣ ರಾಷ್ಟ್ರ ಸಮಿತಿ, ವೈ.ಎಸ್.ಆರ್ ಕಾಂಗ್ರೆಸ್ ಮತ್ತು ಬಿಜು ಜನತಾದಳ ಈಗಾಗಲೇ ಬೆಂಬಲ ವ್ಯಕ್ತಪಡಿಸಿವೆ. ಬಿಎಸ್ಪಿ ನಾಯಕಿ ಮಾಯಾವತಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೆಂಬಲಿಸಲೇ ಬೇಕಾದ ಒತ್ತಡಕ್ಕೆ ಸಿಲುಕಿದಂತಿದೆ.

ರಾಮನಾಥ್ ಕೋವಿಂದ್ ಅವರು ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. 2014 ಲೋಕಸಭಾ ಚುನಾವಣೆಯಲ್ಲಿ 80 ಸ್ಥಾನಗಳ ಪೈಕಿ 73 ಸ್ಥಾನಗಳನ್ನು ನೀಡಿದ ಮತ್ತು 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮೂರನೇ ಎರಡರಷ್ಟು ಬಹುಮತ ನೀಡಿ ಗೆಲ್ಲಿಸಿದ ರಾಜ್ಯವದು. ಕೋವಿಂದ್ ಅವರನ್ನು ಆಯ್ಕೆ ಮಾಡುವ ಮೂಲಕ ರಾಜ್ಯದ ಜನತೆಗೆ ಕೃತಜ್ಞತೆ ತೋರಿಸದಂತೆಯೂ ಆಗುತ್ತದೆ, ಮುಂದಿನ ಲೋಕಸಭಾ ಚುನಾವಣೆಗೆ ಸಹಕಾರಿಯಾಗುವುದೂ ಸತ್ಯ ಎಂಬ ವಿಶ್ವಾಸ.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache