ಮರೆವಿನ ಸಮಸ್ಯೆಯೇ, ಇಲ್ಲಿವೆ ಕೆಲ ಸಿಂಪಲ್ ಸಲಹೆಗಳು – News Mirchi

ಮರೆವಿನ ಸಮಸ್ಯೆಯೇ, ಇಲ್ಲಿವೆ ಕೆಲ ಸಿಂಪಲ್ ಸಲಹೆಗಳು

ಒಂದು ಕಡೆ ಇಟ್ಟ ವಸ್ತು ಅಥವಾ ಹೋಗಬೇಕಿದ್ದ ಕಾರ್ಯಕ್ರಮಗಳನ್ನು ಮರೆಯುವುದು ಸಹಜ. ಬಹುತೇಕ ಸಂದರ್ಭಗಳಲ್ಲಿ ನಾವು ಆ ವಿಷಯ ಅಥವಾ ವಸ್ತುಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿಲ್ಲದಿರುವುದು ಈ ಮರೆವಿಗೆ ಕಾರಣವಾಗುತ್ತದೆ. ಟೇಬಲ್ ಮೇಲಿನ ಗ್ಲಾಸಿನಲ್ಲಿನ ವಿಸ್ಕಿ ಬಗ್ಗೆ ಕೊಟ್ಟಷ್ಟು ಗಮನ ಎದುರಿನ ಹೊಸ ವ್ಯಕ್ತಿಯ ಕಡೆ ಕೊಡುವುದಿಲ್ಲ. ಇನ್ನು ಆ ವ್ಯಕ್ತಿಯ ಹೆಸರು ನೀವು ನೆನಪಿಟ್ಟುಕೊಳ್ಳುವುದು ಹೇಗೆ? ನಿಮ್ಮ ಕಾರನ್ನು ಎಲ್ಲಿ ಪಾರ್ಕ್ ಮಾಡಿದ್ದೀರಾ ಎಂಬುದನ್ನು ಮರೆತಿದ್ದರ ಪರಿಣಾಮ ಶಾಪಿಂಗ್ ಮಾಡುವ ಗುಂಗಿನಲ್ಲಿ ಬಹಳ ದೂರವೇ ನಡೆದುಬಿಟ್ಟಿರುತ್ತೀರಿ. ನಂತರ ಕಾರು ಹುಡುಕಲು ಹೆಣಗಾಡುತ್ತೀರಿ. ಹಲವು ಬಾರಿ ಈ ಮರೆವು ನಾವು ಒತ್ತಡದಲ್ಲಿದ್ದಾಗ, ಅನಾರೋಗ್ಯದಿಂದಿದ್ದಾಗ ಇಂತಹ ಸಂದರ್ಭಗಳು ಎದುರಾಗುತ್ತಿರುತ್ತವೆ.

ನಿಮ್ಮ ಜ್ಞಾಪಕಶಕ್ತಿಯನ್ನು ಸುಧಾರಿಸಲು ಕೆಲವೊಂದು ಸುಲಭ ದಾರಿಗಳಿವೆ. ಅದಕ್ಕೆ ಕೆಲ ಪ್ರಯತ್ನಗಳು ಅಗತ್ಯ….

ನೀವು ಹೆಚ್ಚು ಮರೆಯುವಂತಹ ವಸ್ತುಗಳನ್ನು ಭದ್ರವಾಗಿ ನಿರ್ದಿಷ್ಟ ಜಾಗದಲ್ಲಿಡುವ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಯಾವುದೇ ಕಾರ್ಯಕ್ರಮಗಳ ವೇಳಾಪಟ್ಟಿ, ದೂರವಾಣಿ ಸಂಖ್ಯೆ, ಹುಟ್ಟಿದ ದಿನಾಂಕಗಳನ್ನು ಒಂದು ಕಾಗದ ಅಥವಾ ಪುಸ್ತಕದಲ್ಲಿ ಬರೆಯಿರಿ. ಹೀಗೆ ಬರೆಯುವ ಕ್ರಿಯೆಯಿಂದಾಗಿ ಮುಂದೆ ನೀವು ಆ ಪುಸ್ತಕದತ್ತ ನೋಡದೆಯೇ ಅದರಲ್ಲಿ ಬರೆದ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಸಹಾಯವಾಗುತ್ತದೆ.

ಒಂದು ಕ್ಯಾಲೆಂಡರ್ ಗೋಡೆಗೆ ನೇತುಹಾಕಿ ನಿಮ್ಮ ಕಾರ್ಯಕ್ರಮಗಳ ಪಟ್ಟಿ, ಕುಟುಂಬದ ಪ್ರವಾಸದ ಪ್ಲಾನ್ ಗಳು ಸೇರಿದಂತೆ ಮುಖ್ಯವಾದ ವಿಷಯಗಳನ್ನು ಬರೆದಿಡಿ. ಪ್ರತಿದಿನ ಕ್ಯಾಲೆಂಡರ್ ಗಮನಿಸುವ ಅಭ್ಯಾಸ ರೂಢಿಸಿಕೊಳ್ಳಿ. ನಾಳೆಯ ಕಾರ್ಯಕ್ರಮಗಳು ಯಾವುವು ಎಂಬುದನ್ನು ಇಂದೇ ನೋಡಿ.

ಹೊಸದಾಗಿ ಪರಿಚಯವಾದ ವ್ಯಕ್ತಿಯೊಂದಿಗೆ ಮಾತನಾಡುವಾಗ ಸಾಧ್ಯವಾದಷ್ಟು ಬಾರಿ ಅವರ ಹೆಸರಿಡಿದು ಮಾತನಾಡಿ. ಹೀಗೆ ಮಾಡುವುದರಿಂದ ಒಮ್ಮೆಯಷ್ಟೇ ಭೇಟಿಯಾದರೂ ಮುಂದೊಮ್ಮೆ ಅವರು ಸಿಕ್ಕಾಗ ಥಟ್ಟನೆ ಅವರ ಹೆಸರು ನೆನಪಿಗೆ ಬರುತ್ತದೆ. ಮಾತುಕತೆಯಲ್ಲಿ ಪದೇ ಪದೇ ಹೆಸರು ಬಳಸುವುದರಿಂದ ಆತ್ಮೀಯತೆಯೂ ಹೆಚ್ಚುತ್ತದೆ.

ಕೊಲೆಸ್ಟರಾಲ್, ರಕ್ತದೊತ್ತಡ, ಮಧುಮೇಹ ಹೆಚ್ಚಿದ್ದಾಗ ಮೆದುಳಿನ ಸುತ್ತಲಿನ ರಕ್ತನಾಳಗಳು ಹಾನಿಯಾಗಬಹುದು. ಹಾರ್ವರ್ಡ್ ಅಧ್ಯಯನವೊಂದು ಹೇಳುವಂತೆ ಪರಿಷ್ಕರಿಸಿದ ಕೊಬ್ಬಿನ ಆಹಾರ ಪದಾರ್ಥಗಳನ್ನು(ಮಾಂಸ ಮತ್ತು ಡೈರಿ ಪದಾರ್ಥಗಳಲ್ಲಿ ಕಂಡುಬರುತ್ತದೆ) ಹೆಚ್ಚಾಗಿ ಸೇವಿಸಿದರೆ ಜ್ಞಾಪಕ ಶಕ್ತಿ ಕಡಿಮೆಯಾಗುತ್ತದೆಯಂತೆ. ಆಹಾರದಲ್ಲಿ ತರಕಾರಿ, ಆರೋಗ್ಯಕರ ಆಲಿವ್ ಎಣ್ಣೆ ಬಳಸುವುದು ಮತ್ತು ತಾಜಾ ಆಹಾರವನ್ನು ಸೇವಿಸುವುದರಿಂದ ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ.

ಇದರ ಜೊತೆಗೆ ವ್ಯಾಯಾಮವೂ ನೆನಪಿನ ಶಕ್ತಿಗೆ ಬಹಳ ಅನುಕೂಲಕಾರಿ. ವ್ಯಾಯಾಮವು ಮೆದುಳಿನ ರಕ್ತಸಂಚಾರವನ್ನು ಸರಾಗವಾಗಿಸುತ್ತದೆ. ಪ್ರತಿದಿನ 30 ನಿಮಿಷಗಳಷ್ಟು ಕಾಲ ವ್ಯಾಯಾಮ, ಸಾಕಷ್ಟು ನಿದ್ದೆ ನೆನಪಿನ ವೃದ್ಧಿಗೆ ಸಹಾಯಕಾರಿ.

ಸಿಗರೇಟು ಸೇದುವುದರಿಂದ ರಕ್ತನಾಳಗಳಿಗೆ ಹಾನಿಯಾಗುತ್ತದೆಯಂತೆ. ನೀವು ಹೆಚ್ಚು ಮದ್ಯ ಸೇವನೆ ಮಾಡುತ್ತಿದ್ದರೆ ಅದನ್ನು ಕಡಿಮೆ ಮಾಡಿ ಎಂದು ಅಧ್ಯಯನಗಳು ಹೇಳುತ್ತಿವೆ.

ನೆನಪಿನ ಶಕ್ತಿ ಕಡಿಮೆಯಾಯಿತೆಂದ ಮಾತ್ರಕ್ಕೆ ಅದು ಅಲ್ಜೀಮರ್ ಖಾಯಿಲೆ ಎಂದುಕೊಳ್ಳಬೇಕಿಲ್ಲ. ತಲೆಗೆ ಪೆಟ್ಟು ಬೀಳುವುದು, ಪಾರ್ಶ್ವವಾಯು, ನಿದ್ದೆಯ ಸಮಸ್ಯೆ, ವಿಟಮಿನ್ ಗಳ ಕೊರತೆಯೂ ಕಾರಣವಾಗಬಹುದು.

Loading...