ಜಿಯೋ ಫೋನ್ ಗೆ ಅದ್ಭುತ ಪ್ರತಿಕ್ರಿಯೆ, ಸ್ವಲ್ಪ ಸಮಯದಲ್ಲಿಯೇ ವೆಬ್ಸೈಟ್ ಕ್ರ್ಯಾಷ್

ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನಗಳಿಗೆ ವಿಳಾಸವಾಗಿರುವ ರಿಲಯನ್ಸ್ ಜಿಯೋ, ಗುರುವಾರ ಸಂಜೆ 5:30 ಕ್ಕೆ “ಜಿಯೋ ಫೋನ್” ಬುಕಿಂಗ್ ಆರಂಭಿಸಿತ್ತು. ಏಕಾಏಕಿ ಲಕ್ಷಾಂತರ ಜನ ಗ್ರಾಹಕರು ಫೋನ್ ಬುಕಿಂಗ್ ಗಾಗಿ ಯತ್ನಿಸಿದ್ದರಿಂದಾಗಿ ವೆಬ್ಸೈಟ್ ಸ್ಥಗಿತಕೊಂಡಿತು. ಹೀಗಾಗಿ ಬುಕಿಂಗ್ ಗೆ ಯತ್ನಿಸಿದ ಜನರೆಲ್ಲಾ ನಿರಾಸೆಗೊಳಗಾದರು. ಜಿಯೋ.ಕಾಂ ವೆಬ್ಸೈಟ್ ತೆರೆಯುತ್ತಿರುವಂತೆ ಕಂಟೆಂಟ್ ಸರ್ವರ್ ಎರರ್ ಎಂದು ಕಾಣಿಸಿಕೊಂಡಿತು. ಕೆಲ ಬಳಕೆದಾರರು ಜಿಯೋ.ಕಾಮ್ ತೆರೆಯಲು ಯತ್ನಿಸಿದರೆ ಬ್ಲಾಂಕ್ ಪೇಜ್ ಕಾಣಿಸುತ್ತಿದೆ ಎಂದು ದೂರುತ್ತಿದ್ದಾರೆ.

ವೆಬ್ಸೈಟ್ ಕ್ರ್ಯಾಷ್ ಆಗಿದ್ದರಿಂದ ನೆಟ್ಟಿಗರು ಟ್ವಿಟರ್ ಮೂಲಕ ತಮ್ಮ ಅಸಮಾಧಾನವನ್ನು ತೋಡಿಕೊಳ್ಳುತ್ತಿದ್ದಾರೆ. ಜಿಯೋ ಫೋನ್ ಬುಕಿಂಗ್ ಆರಂಭವಾದ ಒಂದೇ ನಿಮಿಷಕ್ಕೆ ಸರ್ವರ್ ಎರರ್ ಎಂದು ಕಾಣಿಸಿಕೊಂಡಿದೆ. ಫೋನ್ ಖರೀದಿಸಲು ಯಾವುದೇ ಲಿಂಕ್ ಕಾಣದೆ ನೆಟ್ಟಿಗರು ಹುಡುಕಾಡಿ ಸುಮ್ಮನಾದರು. ಇನ್ನು ಮೈ ಜಿಯೋ ಆಪ್ ಮೂಲಕ ಬುಕಿಂಗ್ ಮಾಡಲು ಹೊರಟವರಿಗೂ ಇದೇ ಸಮಸ್ಯೆ ಎದರಾಗಿದೆ.

ಜುಲೈ 21 ರಂದು ಜಿಯೋ ವಾರ್ಷಿಕ ಸಮಾವೇಶದಲ್ಲಿ ಜಿಯೋ ಫೋನ್ ಹೆಸರಿನಲ್ಲಿ ಫೀಚರ್ ಫೋನ್ ಪ್ರಕಟಿಸಲಾಗಿತ್ತು. ಫೋನ್ ಉಚಿತವಾದರೂ, ಭದ್ರತಾ ಠೇವಣಿ ಎಂದು ಇದಕ್ಕಾಗಿ ರೂ.1500 ಪಾವತಿ ಮಾಡಬೇಕಿರುತ್ತದೆ. ಮೂರು ತಿಂಗಳ ನಂತರ ಆ ಹಣವನ್ನು ಗ್ರಾಹಕರಿಗೆ ರಿಲಯನ್ಸ್ ಜಿಯೋ ವಾಪಸ್ ನೀಡುತ್ತದೆ ಎಂದು ಪ್ರಕಟಿಸಿತು.