ಪ್ರತಿಯೊಂದು ರೀತಿಯ ಅಪ್ಪುಗೆಗೂ ಒಂದೊಂದು ಅರ್ಥವಿದೆ ಬಲ್ಲಿರಾ

ನಮ್ಮ ಸ್ನೇಹಿತರು, ಆಪ್ತರು ಎದುರಿಗೆ ಸಿಕ್ಕಾಗ ಅವರನ್ನು ಅಪ್ಪಿಕೊಂಡು ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವುದು ಈಗೀಗ ಸಾಮಾನ್ಯವಾಗಿ ಹೋಗಿದೆ. ಈ ಅಪ್ಪುಗೆಗಳಲ್ಲಿ ಹಲವು ವಿಧಗಳಿದ್ದು, ಅವುಗಳಲ್ಲಿ ಬೆಚ್ಚನೆಯ ಅಪ್ಪುಗೆ ತುಂಬಾ ಪ್ರಮುಖವಾಗಿದ್ದು, ಇದರ ಕುರಿತು ವ್ಯಾಪಕವಾಗಿ ಚರ್ಚಿಸಲಾಗುತ್ತದೆ. ಏಕಾಂಗಿಯಾಗಿರುವವರಿಗೆ ಈ ಅಪ್ಪುಗೆ ಎನ್ನುವುದು ಒಂದು ಔಷಧವಾಗಿ ಕೆಲಸ ಮಾಡುತ್ತದೆ.

ಅಪ್ಪುಗೆ ಸರಿ, ಅದರಲ್ಲಿ ಬೇರೆ ಬೇರೆ ವಿಧಗಳಿವೆಯಾ ಎಂಬ ಕುತೂಹಲವಿದ್ದರೆ ಮುಂದೆ ಓದಿ…

ಬೆಚ್ಚನೆಯ ಅಪ್ಪುಗೆ
ಬೆಚ್ಚನೆಯ ಅಪ್ಪುಗೆ ಈಗ ಎಲ್ಲೆಡೆ ಕಂಡುಬರುವ ದೃಶ್ಯ. ಒಬ್ಬರ ಜೀವನದಲ್ಲಿ ನಿಮ್ಮ ಪ್ರವೇಶ ಅವರಿಗೆ ತುಂಬಾ ಖುಷಿಯಾಗಿದೆ ಎಂದಾಗ ಇಂತಹ ಅಪ್ಪುಗೆ ಕಂಡುಬರುತ್ತದೆ. ಎದುರಿನ ವ್ಯಕ್ತಿಯು ನಿಮ್ಮನ್ನು ಅಪ್ಪಿಕೊಂಡಾಗ, ಆತನ ತೋಳಿನಲ್ಲಿ ನೀವು ಸುರಕ್ಷಿತ ಎಂಬ ಭಾವನೆ ಮೂಡಿಸುವಂತದ್ದು, ವಿಶ್ವಾಸ ಮೂಡಿಸುವಂತದ್ದು. ಅಪ್ಪುಗೆಗಳಲ್ಲಿಯೇ ಉತ್ತಮವಾದದ್ದು ಬೆಚ್ಚನೆಯ ಅಪ್ಪುಗೆಯಾಗಿದ್ದು, ಎದುರಿನ ವ್ಯಕ್ತಿಯ ಮುಖದಲ್ಲಿ ಬಹು ಬೇಗ ನಗು ಕಾಣಬಹುದು.

ನಿದ್ದೆಯಪ್ಪುಗೆ
ಇಂತಹ ಅಪ್ಪುಗೆಗಳು ಸಾಮಾನ್ಯವಾಗಿ ಯುವತಿಯರಲ್ಲಿ ಕಂಡು ಬರುತ್ತವೆ. ನಿಮ್ಮನ್ನು ತಬ್ಬಿಕೊಂಡು ಎದೆಯ ಮೇಲೆ ನಿದ್ರಿಸುವುದು, ವಿಶ್ರಾಂತಿ ಪಡೆಯುವ ಮೂಲಕ ಅವರ ಜೀವನದಲ್ಲಿ ನಿಮ್ಮನ್ನು ಎಷ್ಟು ಬಲವಾಗಿ ನಂಬಿದ್ದಾರೆ ಎಂಬುದು ತೋರಿಸುತ್ತದೆ.

ಒಂದು ತೋಳಿನ ಅಪ್ಪುಗೆ
ಇದೊಂದು ಹಿಂಜರಿಯುತ್ತಲೇ ನೀಡುವ, ಪೂರ್ಣವಾಗಿ ತಬ್ಬಿಕೊಳ್ಳಲು ಇಷ್ಟಪಡದವರು ನೀಡುವ ಕಾಟಾಚಾರದ ಅಪ್ಪುಗೆ. ಎದುರಿನ ವ್ಯಕ್ತಿಯೊಂದಿಗೆ ಹೆಚ್ಚು ನಂಟು ಬೆಳೆಸಿಕೊಳ್ಳಲು ಬಯಸದವರು ನೀಡುವ ಅಪ್ಪುಗೆ. ಅಪ್ಪಿಕೊಳ್ಳುವ ಅಭ್ಯಾಸವಿಲ್ಲದವರೂ ಆರಂಭದಲ್ಲಿ ಹಿಂಜರಿಕೆಯಿಂದ ಹೀಗೆ ಮಾಡುವುದು ಉಂಟು.

ಮುದ್ದಾಡುವ ಅಪ್ಪುಗೆ
ಇದು ಪ್ರೇಮಿಗಳಲ್ಲಿ, ಗಂಡ ಹೆಂಡಿರ ನಡುವೆ ಕಂಡು ಬರುತ್ತದೆ. ಇಂತಹ ಅಪ್ಪುಗೆ ಎರಡು ವ್ಯಕ್ತಿಗಳ ನಡುವಿನ ಆಳವಾದ ಪ್ರೀತಿಯನ್ನು ಸೂಚಿಸುತ್ತದೆ. ನೀವು ಎದುರಿನ ವ್ಯಕ್ತಿಯನ್ನು ಸಂಪೂರ್ಣವಾಗಿ ನಂಬಿದಾಗ, ಪ್ರೀತಿಸಿದಾಗ ಮಾತ್ರ ಇಂತಹ ಅಪ್ಪುಗೆಗೆ ಮುಂದಾಗುತ್ತೀರಿ.

ಏಕಮುಖ ಅಪ್ಪುಗೆ
ಇದು ನಿಮಗೆ ಮುಜುಗರ ತರುವ ಅಪ್ಪುಗೆ. ವ್ಯಕ್ತಿಯನ್ನು ನೀವು ತಬ್ಬಿಕೊಂಡಾಗ, ಅದಕ್ಕೆ ಪ್ರತಿಯಾಗಿ ಎದುರಿನ ವ್ಯಕ್ತಿ ನಿಮ್ಮನ್ನು ಅಪ್ಪಿಕೊಳ್ಳದೆ ಸುಮ್ಮನೆ ಕಂಬದಂತೆ ನಿಂತಿರುವುದು ಏಕಮುಖ ಅಪ್ಪುಗೆ. ಎದುರಿನ ವ್ಯಕ್ತಿಗೆ ನಿಮನ್ನು ಅಪ್ಪಿಕೊಳ್ಳಲು ಈಗ ಮನಸ್ಸಿಲ್ಲ, ಅಥವಾ ನಿಮ್ಮನ್ನು ತಬ್ಬಿಕೊಳ್ಳಲು ಅವರಿಗೆ ಆಸಕ್ತಿಯೇ ಇಲ್ಲ.

ಅವಸರದ ಅಪ್ಪುಗೆ (ಕ್ವಿಕ್ ಹಗ್)
ಇದೂ ತುಂಬಾ ಪ್ರಸಿದ್ಧವಾದ ಅಪ್ಪುಗೆ. ಆತುರದಲ್ಲಿ ಸರಿಯಾಗಿ ತಬ್ಬಿಕೊಳ್ಳದ ಈ ಕ್ರಿಯೆ ಕೆಲವೊಮ್ಮೆ ಚೆನ್ನಾಗಿದೆ ಅನ್ನಿಸಿದರೂ, ಕೆಲವೊಮ್ಮೆ ಬೇಸರವುಂಟು ಮಾಡುತ್ತದೆ. ನಿಮ್ಮನ್ನು ತರಾತುರಿಯಲ್ಲಿ ತಬ್ಬಿಕೊಂಡು ಕ್ಷಣಗಳಲ್ಲಿಯೇ ಮತ್ತೊಂದು ಕಡೆ ಹೊರಟು ಬೇರೊಂದು ಮುಖ್ಯವಾದ ಕೆಲಸದಲ್ಲಿ ನಿರತರಾಗುತ್ತಾರೆ. ನೀವು ಅಷ್ಟೊಂದು ಇಷ್ಟ ಪಡುವ ವ್ಯಕ್ತಿ ಹಾಗೆ ತಬ್ಬಿ ಕ್ಷಣದಲ್ಲೇ ಹಾಗೇ ದೂರ ಸರಿದು ಮತ್ತೊಂದು ಕೆಲಸದಲ್ಲಿ ಮಗ್ನನಾದರೆ, ಆತನಲ್ಲಿ ನಿಮಗೆಷ್ಟು ಜಾಗವಿದೆ ಎಂಬುದು ನಿಮ್ಮ ಮನಸ್ಸಿನಲ್ಲಿ ಕೊರೆಯುತ್ತಿರುತ್ತದೆ.

ಕರಡಿ ಅಪ್ಪುಗೆ
ತುಂಬಾ ದಿನಗಳಿಂದ ದೂರವಿದ್ದವರು ಭೇಟಿಯಾದಾಗ ಅಪ್ಪಿಕೊಳ್ಳುವ ವಿಧಾನವಿದು. ಇಷ್ಟು ದಿನ ಮಿಸ್ ಮಾಡಿಕೊಂಡ ವ್ಯಕ್ತಿಯನ್ನು ಕಂಡು ತುಂಬಾನೇ ಸಂತೋಷಗೊಂಡಿದ್ದೀರಿ ಎಂದು ಈ ರೀತಿ ತಬ್ಬಿಕೊಳ್ಳುವುದು ತೋರಿಸುತ್ತದೆ. ಕೆಲವೊಮ್ಮೆ ಎದುರಿನ ವ್ಯಕ್ತಿಯನ್ನು ಮೇಲೆತ್ತಿ ಅಪ್ಪಿಕೊಳ್ಳುವುದು ಇಂತಹ ಸಂದರ್ಭಗಳಲ್ಲಿ ಕಂಡು ಬರುತ್ತದೆ.