ಕ್ಯಾನ್ಸರ್ ಇದೆ ಎಂದು ಫೇಸ್ಬುಕ್ ಸ್ನೇಹಿತರಿಂದ 30 ಲಕ್ಷ ವಂಚಿಸಿದ ಯುವತಿ

ತನಗೆ ಕ್ಯಾನ್ಸರ್ ಇದೆ ಎಂದು ಫೇಸ್ಬುಕ್ ಸ್ನೇಹಿತರನ್ನು ನಂಬಿಸಿ ಸುಮಾರು 30 ಲಕ್ಷ ರೂಪಾಯಿ ಹಣ ಪಡೆದ ಯುವತಿಯೊಬ್ಬಳನ್ನು ಹೈದರಾಬಾದಿನ ಬಂಜಾರಾ ಹಿಲ್ಸ್ ಪೊಲೀಸರು ಬಂಧಿಸಿದ್ದಾರೆ.

ಸೈದಾಬಾದ್ ನಿವಾಸಿ ಸಮಿಯಾ ಎಂಬಾಕೆ ಪದವಿ ವ್ಯಾಸಂಗ ಪೂರ್ಣಗೊಳಿಸಿ ಮನೆಯಲ್ಲಿದ್ದಳು. ತಂದೆ ಹುಸೇನ್ ಸೌದಿ ಅರೇಬಿಯಾದಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತಿದ್ದಾರೆ. ಆಗಾಗ ತಂದೆಯ ಬಳಿಗೆ ಹೋಗುತ್ತಿದ್ದ ಸಮಿಯಾ ಅಲ್ಲಿ ಒಂದಷ್ಟು ದಿನ ಇದ್ದು ಭಾರತಕ್ಕೆ ವಾಪಸಾಗುತ್ತಿದ್ದಳು. ಎರಡು ವರ್ಷಗಳ ಹಿಂದೆ ತಂದೆಗೆ ಕ್ಯಾನ್ಸರ್ ಇರುವುದು ತಿಳಿದು ಬಂದಿತ್ತು. ಆಗ ಅಲ್ಲಿ ಕೆಲ ದಿನ ಇದ್ದ ಸಮಿಯಾ ಹಲವರೊಂದಿಗೆ ಸ್ನೇಹ ಸಂಪಾದಿಸಿದ್ದಳು.

ಸೌದಿಯಿಂದ ವಾಪಸಾದ ನಂತರ ಹೈದರಾಬಾದಿನ ಒಮೇಘಾ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿದ ಸಮಿಯಾ, ತಂದೆಯ ಖಾಯಿಲೆಯ ಬಗ್ಗೆ ವಿಚಾರಿಸಿದ್ದಾಳೆ. ನಂತರ ವೈದ್ಯರೊಂದಿಗೆ ಒಂದು ಸೆಲ್ಫಿಯನ್ನೂ ತೆಗೆಸಿಕೊಂಡಿದ್ದಾಳೆ.

ವೈದ್ಯರೊಂದಿಗಿರುವ ಸೆಲ್ಫೀಯನ್ನು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ ಸಮಿಯಾ, ತನಗೇ ಕ್ಯಾನ್ಸರ್ ಇರುವುದಾಗಿ ಹೇಳಿ, ಹಣದ ಕೊರತೆಯಿಂದ ಚಿಕಿತ್ಸೆ ಪಡೆಲಾಗುತ್ತಿಲ್ಲ ಎಂದು ಹೇಳಿದ್ದಳು. ಇದನ್ನು ನಂಬಿದ ಹಲವರು ಆಕೆಗೆ ಹಣ ಕಳುಹಿಸಿದರು. ಕಳೆದ ತಿಂಗಳು ತನಗೆ ಶಸ್ತ್ರ ಚಿಕಿತ್ಸೆ ನಡೆಯಿತು ಎಂದು ಆಕೆ ಫೇಸ್ಬುಕ್ ನಲ್ಲಿ ಅಪ್ಡೇಟ್ ಮಾಡಿದ್ದಳು. ಇದನ್ನು ನೋಡಿ ಆಸ್ಪತ್ರೆಯಲ್ಲಿ ಆಕೆಯನ್ನು ನೋಡಲು ಸೌದಿಯಿಂದ ಕೆಲ ಸ್ನೇಹಿತರು ಬಂದರು. ಆದರೆ ಅವರಿಗೆ ಶಾಕ್… ಅಂತಹ ಕ್ಯಾನ್ಸರ್ ರೋಗಿ ಯಾರೂ ಇಲ್ಲವೆಂಬ ಉತ್ತರ ವೈದ್ಯರಿಂದ. ಕೊನೆಗೆ ವೈದ್ಯರಿಗೆ ಸೆಲ್ಫೀ ತೋರಿಸಿದಾಗ, ಆಗ ಆ ಯುವತಿಯನ್ನು ವೈದ್ಯರು ಗುರುತಿಸಿದ್ದಾರೆ.

ತಮ್ಮನ್ನು ಮೋಸ ಮಾಡಿದಳೆಂದು ಆಕೆಯ ಸ್ನೇಹಿತರು ಪೊಲೀಸ್ ದೂರು ನೀಡಿದರೆ, ನಮ್ಮ ಆಸ್ಪತ್ರೆ ಹೆಸರು ಬಳಸಿ ಕೆಟ್ಟ ಹೆಸರು ತಂದಿದ್ದಾಳೆ ಎಂದು ಆಸ್ಪತ್ರೆಯವರು ಮತ್ತೊಂದು ದೂರು ನೀಡಿದ್ದಾರೆ.

ತಮ್ಮ ತಂದೆಗೆ ಕ್ಯಾನ್ಸರ್ ಇದೆ ಎಂದರೆ ಯಾರೂ ಸಹಾಯ ಮಾಡುವುದಿಲ್ಲ, ಹಾಗಾಗಿ ಹೀಗೆ ಮಾಡಿದೆ ಎನ್ನುತ್ತಿದ್ದಾಳೆ ಸಮಿಯಾ.

Loading...
error: Content is protected !!