ಬೀಫ್ ಕುರಿತು ಮೋದಿ ಸಂಪುಟದ ನೂತನ ಸಚಿವ ಅಲ್ಫೋನ್ಸ್ ಮಾತು

View Later

ಮೋದಿ ಸಂಪುಟದಲ್ಲಿ ಪ್ರವಾಸೋದ್ಯಮ ರಾಜ್ಯ ಖಾತೆ ಸಚಿವರಾಗಿ ಸೇರ್ಪಡೆಯಾದ ಮಾಜಿ ಅಧಿಕಾರಿ ಕೆ.ಜೆ.ಅಲ್ಫೋನ್ಸ್ ಬೀಫ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ, ಕ್ರೈಸ್ತರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತೇನೆ ಎಂದ ಅವರು, ಮೋದಿ ಸರ್ಕಾರ ಎಲ್ಲಾ ಸಮುದಾಯಗಳನ್ನೂ ಸೇರಿಸಿಕೊಂಡು ಮುಂದುವರೆಯುತ್ತದೆ ಎಂದರು.

ಇದೇ ವೇಳೆ ಗೋವಾದಲ್ಲಿ ಬೀಫ್ ಸೇವಿಸುವುದರ ಕುರಿತು ತಮ್ಮ ಸರ್ಕಾರಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಗೋವಾದಲ್ಲಿ ಬೀಫ್ ಕೊರತೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನೀಡಿದ್ದ ಹೇಳಿಕೆಯನ್ನು ನೆನಪಿಸಿದ ಅಲ್ಫೋನ್ಸ್, ಯಾವುದೇ ರಾಜ್ಯದಲ್ಲಿ ಆಹಾರ ಸೇವನೆಗೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧಗಳಿಲ್ಲ ಎಂದು ಹೇಳಿದರು. ಯಾವುದು ತಿನ್ನಬೇಕು ಯಾವುದು ತಿನ್ನಬಾರದು ಎಂಬುದು ಜನರ ವಿವೇಚನೆಗೆ ಬಿಟ್ಟದ್ದು ಎಂದರು.

ನಿಮ್ಮ ನಂಬಿಕೆಗಳೇನೇ ಇರಲಿ, ನಾವು ನಿಮ್ಮನ್ನು ಕಾಪಾಡುತ್ತೇವೆ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ ಎಂದು ಅಲ್ಫೋನ್ಸ್ ವಿವರಿಸಿದರು. ಮೋದಿ ಆಡಳಿತದಲ್ಲಿ ಒಂದೇ ಒಂದು ಚರ್ಚ್ ಅಥವಾ ಮಸೀದಿ ಗಲಭೆ ಇಲ್ಲ. ಅವರು ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಪ್ರಾಮಾಣಿಕ ಅಧಿಕಾರಿಯಾಗಿ ಹೆಸರು ಮಾಡಿರುವ ಅಲ್ಫೋನ್ಸ್ ಅವರಿಗೆ ಮೋದಿ ಸಂಪುಟದಲ್ಲಿ ಜವಾಬ್ದಾರಿ ಸ್ವೀಕರಿಸುವ ಸಮಯದಲ್ಲಿಯೂ ತಮ್ಮ ದೃಢವಾದ ವರ್ತನೆಯನ್ನು ಬದಲಿಸಿಕೊಳ್ಳಲಿಲ್ಲ. ಔಪಚಾರಿಕವಾಗಿ ಸಚಿವರಾಗಿ ಜವಾಬ್ದಾರಿ ವಹಿಸಿಕೊಳ್ಳುವವರೆಗೂ ಆ ಸೀಟಿನಲ್ಲಿ ಕೂರಲೂ ಅವರು ನಿರಾಕರಿಸಿದರು.