ಹಾರಿಸಿದ್ದ ಗುಂಡಿಗೆ ವರನ ಸಂಬಂಧಿ ಸಾವು, ಶರಣಾದ ಮಾತಾಜಿ

ಕರ್ನಲ್: ಮದುವೆ ಸಂಭ್ರಮದ ವೇಳೆ ಗುಂಡು ಹಾರಿಸಿ, ನಂತರ ಪರಾರಿಯಾಗಿದ್ದ ಸಾದ್ವಿ ದೇವ ಠಾಕೂರ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ಶುಕ್ರವಾರ ಪೊಲೀಸ್ ಠಾಣೆಗೆ ಬಂದ ಆಕೆ, ತಾನು ಏನೂ ತಪ್ಪೆಸಗಿಲ್ಲ ಎಂದು ಹೇಳಿದ್ದಾರೆ. ಅಧಿಕಾರಿಗಳು ಹೇಳುವಂತೆ… ಉತ್ತರದ ರಾಜ್ಯಗಳಲ್ಲಿ ಮದುವೆ ಆಚರಣೆಗಳು ನಡೆಯುವ ವೇಳೆ ಸಂತೋಷಕ್ಕೆ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಈ ವಾರದ ಆರಂಭದಲ್ಲಿ ಹರಿಯಾಣದ ಕರ್ನಲ್ ಜಿಲ್ಲೆಯಲ್ಲಿ ಸಾವಿತ್ರಿ ಲಾನ್ಸ್ ಎಂಬ ಕಲ್ಯಾಣ ಮಂಟಪದಲ್ಲಿ ವಿವಾಹವೊಂದು ನಡೆಯಿತು. ಅದರಲ್ಲಿ ಪಾಲ್ಗೊಂಡ ಸಾಧ್ವಿ ದೇವ ಅವರೊಂದಿಗೆ ಆಕೆಯ ಸಹಚರರೂ ತಮ್ಮ ಬಳಿಯಿದ್ದ ಬಂದೂಕುಗಳಿಂದ ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೆ ದುರದೃಷ್ಟವಶಾತ್ ಈ ವೇಳೆ ವರನ ಸೋದರತ್ತೆಗೆ ಗುಂಡು ತಗುಲಿ ಸಾವನ್ನಪ್ಪಿದರೆ, ಮೂವರು ಗಾಯಗೊಂಡಿದ್ದರು.

ನಂತರ ಸಹಚರರೊಂದಿಗೆ ಅಲ್ಲಿಂದ ಪರಾರಿಯಾಗಿದ್ದ ಈಕೆ, ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದು, ತಾನು ತಪ್ಪು ಮಾಡಿಲ್ಲ, ತನ್ನ ಜೊತೆ ಇನ್ನು ಕೆಲವರು ಗುಂಡು ಹಾರಿಸಿದರು ಎಂದು ಆಕೆ ಹೇಳಿದ್ದಾರೆ. ತಾನು ಹಾರಿಸಿದ ಗುಂಡಿಗೆ ಯಾರೂ ಗಾಯಗೊಂಡಿಲ್ಲ ಎಂದು ಆಕೆ ಹೇಳಿದ್ದಾರೆ. ಪೊಲೀಸರಿಗೆ ಸಿಕ್ಕ ವೀಡಿಯೋದಲ್ಲೂ ಸಾಧ್ವಿ ಗಾಳಿಯಲ್ಲಿ ಗುಂಡು ಹಾರಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ.