ಮೋದಿ ಎಂದರೆ ಇಷ್ಟಾನೇ, ಆದರೆ ಅಮಿತ್ ಶಾ ಅಂದ್ರೆ ಕಷ್ಟ

ನಿನ್ನೆಯವರೆಗೂ ಮೋದಿ ಮತ್ತು ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದ್ದಕ್ಕಿದ್ದಂತೆ ಮೋದಿ ಅಭಿಮಾನಿಯಾಗಿದ್ದಾರೆ. ಇದಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲವಾದರೂ, ತನಗೆ ಪ್ರಧಾನಿ ನರೇಂದ್ರ ಮೋದಿಯವರೆಂದರೆ ತುಂಬಾ ಅಭಿಮಾನವಿದೆ. ಅವರೊಂದಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗಷ್ಟೇ ಸಮಸ್ಯೆ ಎಂದು ಅವರು ಹೇಳಿದ್ದಾರೆ.

ಟಿವಿ ಚಾನೆಲ್ ನೊಂದಿಗೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಆಕೆ, ಅಮಿತ್ ಶಾ ಅವರ ಸರ್ವಾಧಿಕಾರಿ ಧೋರಣೆಯಿಂದ ಸಮಸ್ಯೆಯುಂಟಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷರನ್ನು ಗುರಿಯಾಗಿಸಿ ದಾಳಿ ನಡೆಸಿದರು. ಪಕ್ಷದ ಅಧ್ಯಕ್ಷ ಸರ್ಕಾರದ ವ್ಯವಹಾರಗಳಲ್ಲಿ ಮೂಗು ತೂರಿಸಿ ಸರ್ವಾಧಿಕಾರಿ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಆಕೆ ಆರೋಪಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಮೇಲೆ ಪ್ರಶಂಸೆಗಳ ಸುರಮಳೆಗೈದ ಮಮತಾ, ವಾಜಪೇಯಿ ಬಿಜೆಪಿ ವ್ಯಕ್ತಿಯಾದರೂ ಅವರು ಸಮತೋಲನದಿಂದ, ನಿಷ್ಪಕ್ಷಪಾತದಿಂದ ಸರ್ಕಾರ ನಡೆಸಿದರು. ಅವರ ಕೆಳಗೆ ಕೆಲಸ ಮಾಡಿದಾಗ ನನಗೆ ಯಾವುದೇ ಸಮಸ್ಯೆಯಾಗಲಿಲ್ಲ ಎಂದ ಆಕೆ, ಈಗಿನ ಪರಿಸ್ಥಿತಿಗಳಿಗೆ ಬಿಜೆಪಿ ವಿರುದ್ಧ ಆಕೆ ಆಕ್ರೋಶ ವ್ಯಕ್ತಪಡಿಸಿದರು. ಆದರೆ ಪ್ರಧಾನಿ ಮೋದಿಯವರನ್ನು ನೆಪ ಮಾತ್ರಕ್ಕೂ ದೂರಲಿಲ್ಲ. ನಾವು ಈಗ ಏಕೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ? ಈ ವಿಷಯದಲ್ಲಿ ಪ್ರಧಾನಿಯನ್ನು ನಾನು ದೂಷಿಸುವುದಿಲ್ಲ, ಆದರೆ ಅವರು ಅವರ ಪಕ್ಷದ ಕುರಿತು ಎಚ್ಚರಿಕೆಯಿಂದಿರಬೇಕು. ಅವರ ಪಕ್ಷವೇಕೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಶ್ನಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಿದ ಮಮತಾ ಬ್ಯಾನರ್ಜಿ, “ಎಲ್ಲರೂ ಆತಂಕಗೊಂಡಿದ್ದಾರೆ. ಯಾರಾದರೂ ಏನಾದರೂ ಪ್ರಶ್ನಿಸಿದರೆ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ತೆರಿಗೆ ಇಲಾಖೆಯನ್ನು ಅವರ ಮೇಲೆ ಮನೆಗಳ ಮೇಲೆ ದಾಳಿಗೆ ಬಿಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಪಕ್ಷಗಳು ಬಲಗೊಳ್ಳುವುದು ಹೇಗೆ? ದೇಶದಲ್ಲಿ ಸೂಪರ್ ಡಿಕ್ಟೇಟರ್ಷಿಪ್ ನಡೆಯುತ್ತಿದೆ. ಒಂದ ರಾಜಕೀಯ ಪಕ್ಷದ ಅಧ್ಯಕ್ಷ ಸಚಿವರೊಂದಿಗೆ ಅದು ಹೇಗೆ ಸಭೆ ನಡೆಸುತ್ತಾರೆ? ನಮ್ಮ ಪ್ರಧಾನಿ ನರೇಂದ್ರ ಮೋದೀನಾ, ಅಮಿತ್ ಶಾ ನಾ? ಎಂದು ಆಕೆ ಆಕ್ರೋಶ ವ್ಯಕ್ತಪಡಿಸಿದರು. ನನಗೆ ಮೋದಿ ಎಂದರೆ ಇಷ್ಟ, ಆದರೆ ಅಮಿತ್ ಶಾ ಎಂದುರೆ ಆಗದು ಎಂದು ಒತ್ತಿ ಹೇಳಿದರು.