ಐಟಿ ರೇಡ್: ಇದುವರೆಗೂ ಪತ್ತೆಯಾಗಿದ್ದು 300 ಕೋಟಿ ಅಘೋಷಿತ ಆಸ್ತಿ? – News Mirchi

ಐಟಿ ರೇಡ್: ಇದುವರೆಗೂ ಪತ್ತೆಯಾಗಿದ್ದು 300 ಕೋಟಿ ಅಘೋಷಿತ ಆಸ್ತಿ?

ಬೆಂಗಳೂರು: ಆದಾಯ ತೆರಿಗೆ ಇಲಾಖೆಯು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರ ಮನೆಗಳ ಮೇಲೆ ನಡೆಸಿದ ದಾಳಿಯಲ್ಲಿ ಇದುವರೆಗೂ 300 ಕೋಟಿಗೂ ಅಧಿಕ ಮೊತ್ತದ ಅಘೋಷಿತ ಆದಾಯವನ್ನು ಪತ್ತೆ ಹಚ್ಚಿದೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ. ಕರ್ನಾಟಕ, ದೆಹಲಿ ಸೇರಿದಂತೆ ಡಿ.ಕೆ.ಶಿವಕುಮಾರ್ ಮತ್ತವರ ಕುಟುಂಬಗಳಿಗೆ ಸೇರಿದ 64 ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು.

ಪತ್ತೆಯಾದ 300 ಕೋಟಿ ಅಘೋಷಿತ ಆದಾಯದಲ್ಲಿ 100 ಕೋಟಿಗೂ ಅಧಿಕ ಮೊತ್ತ ಶಿವಕುಮಾರ್ ಮತ್ತು ಕುಟುಂಬದವರಿಗೆ ಸೇರಿದ್ದಾಗಿದೆ ಎಂದು ವರದಿಯಾಗಿದೆ. ಉಳಿದ 200 ಕೋಟಿ ಅಘೋಷಿತ ಆದಾಯ ಪ್ರಮುಖ ರಿಯಲ್ ಎಸ್ಟೇಟ್ ಗ್ರೂಪ್ ಮತ್ತು ಟ್ರಾನ್ಸ್ ಪೋರ್ಟ್ ಕಂಪನಿ ಸೇರಿದಂತೆ ವಿವಿಧ ಉದ್ಯಮಗಳಿಗೆ ಸಂಬಂಧಿಸಿದ್ದು, ಇವುಗಳಲ್ಲಿ ಡಿ.ಕೆ.ಶಿವಕುಮಾರ್ ಬಂಡವಾಳ ಹೂಡಿದ್ದಾರೆ ಎನ್ನಲಾಗಿದೆ. [ರಾಜಕೀಯವಾಗಿ ನನ್ನ ಮಗನನ್ನು ಮುಗಿಸಲು ಪಕ್ಷದಲ್ಲೇ ಸಂಚು: ಡಿಕೆಶಿ ತಾಯಿ]

ಬುಧವಾರ ಆರಂಭವಾದ ತೆರಿಗೆ ದಾಳಿ ವೇಳೆ 15 ಕೋಟಿ ಮೌಲ್ಯದ ಆಭರಣ ಸೇರಿದಂತೆ ಅಘೋಷಿತ ಆಸ್ತಿಗಳನ್ನು, ದಾಖಲೆ ಪತ್ರಗಳನ್ನೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಸಂಪೂರ್ಣ ಅಘೋಷಿತ ಆಸ್ತಿಯ ಮೌಲ್ಯವನ್ನು ತಿಳಿಯಲು ವಶಕ್ಕೆ ತೆಗೆದುಕೊಂಡಿರುವ ದಾಖಲೆಗಳನ್ನು ಪರಿಶೀಲಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ. ಡಿ.ಕೆ.ಶಿವಕುಮಾರ್ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿಕೊಂಡಿದ್ದರೇ ಎಂಬುದರ ಕುರಿತು ತನಿಖೆ ನಡೆಸಲು ಜಾರಿ ನಿರ್ದೇಶನಾಲಯವೂ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ.

Loading...