ಮತ್ತೊಮ್ಮೆ ಸಂಕಷ್ಟದಲ್ಲಿ ಬಿಗ್ ಬಿ |News Mirchi

ಮತ್ತೊಮ್ಮೆ ಸಂಕಷ್ಟದಲ್ಲಿ ಬಿಗ್ ಬಿ

ನವದೆಹಲಿ: ಪನಾಮಾ ಪೇಪರ್ಸ್ ಸೋರಿಕೆಯಲ್ಲಿ ಕಂಡು ಬಂದ ಹೆಸರುಗಳಲ್ಲಿ ಈಗಾಗಲೇ ಸುಮಾರು 33 ಜನರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಆದಾಯ ತೆರಿಗೆ ಇಲಾಖೆ, ಇತರರ ಮೇಲೂ ತನಿಖೆಯನ್ನು ಚುರುಕುಗೊಳಿಸಿದೆ. ಪನಾಮಾ ಪೇಪರ್ಸ್ ನಲ್ಲಿರುವ ಹೆಸರುಗಳಲ್ಲಿ ಮತ್ತಷ್ಟು ಜನರ ವಿವರಗಳನ್ನು ಆದಾಯ ತೆರಿಗೆ ಇಲಾಖೆ ಕಲೆ ಹಾಕುತ್ತಿದೆ. ಹೀಗಾಗಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಗೆ ಮತ್ತೊಮ್ಮೆ ಸಂಕಷ್ಟ ಎದುರಾಗಲಿದೆ. ಈ ಪ್ರಕರಣದಲ್ಲಿ ಬಿಗ್ ಬಿ ಸೇರಿದಂತೆ ಹಲವರ ಮೇಲೆ ಕೂಡಾ ಆದಾಯ ತೆರಿಗೆ ಇಲಾಖೆ ಗಮನ ಹರಿಸಿದೆ. ಪನಾಮಾ ಪೇಪರ್ಸ್ ಲೀಕ್ ವಿಚಾರಣೆಯಲ್ಲಿ ಹೆಚ್ಚಿನ ಮಾಹಿತಿಗಾಗಿ ಗ್ಲೋಬಲ್ ಟಾಸ್ಕ್ ಫೋರ್ಸ್ ನಲ್ಲಿ ಸೇರಿರುವ ಭಾರತ, ಇದಕ್ಕೆ ಸಂಬಂಧಿಸಿದಂತೆ ಅತ್ಯುನ್ನತ ಮಟ್ಟದ ತಂಡವನ್ನು ಕೆರಿಬಿಯನ್ ನಲ್ಲಿರುವ ಬ್ರಿಟೀಷ್ ವರ್ಜಿನ್ ಐಲ್ಯಾಂಡ್ ಗೆ ಕಳುಹಿಸಿದೆ.

ತೆರಿಗೆ ವಂಚಕರಿಗೆ ಸ್ವರ್ಗ ಎಂದು ಕರೆಯಲ್ಪಡುವ ಪ್ರದೇಶಗಳಲ್ಲಿ ಕೆರಿಬಿಯನ್ ನಲ್ಲಿರುವ ಬ್ರಿಟೀಷ್ ವರ್ಜಿನ್ ಐಲ್ಯಾಂಡ್ ಕೂಡಾ ಒಂದು. ಅಮಿತಾಬ್ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಹೆಸರು ಹೇಳಲಿಚ್ಚಿಸದ ತೆರಿಗೆ ಅಧಿಕಾರಿಯೊಬ್ಬರು, “ಈಗಾಗಲೇ ತಮ್ಮ ಮೇಲಿನ ಆರೋಪಗಳನ್ನು ಅಮಿತಾಬ್ ಬಚ್ಚನ್ ಅಲ್ಲಗೆಳೆದಿದ್ದಾರೆ, ಸಂಪೂರ್ಣ ಮಾಹಿತಿ ಸಿಗುವವರೆಗೂ ವಿಚಾರಣೆ ನಡೆಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಈ ಪ್ರಕರಣದ ತನಿಖೆ ಸುದೀರ್ಘವಾದ ಪ್ರಕ್ರಿಯೆಯಾಗಿದ್ದು, ಪನಾಮಾ ಪೇಪರ್ಸ್ ನಲ್ಲಿ ಕಂಡು ಬಂದ ಹೆಸರುಗಳಲ್ಲಿನ ಯಾರೊಬ್ಬರ ವಿಚಾರಣೆಯನ್ನೂ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

35 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪನಾಮಾದ ಕಾನೂನು ಸಂಸ್ಥೆ ಮೊಸ್ಸಾಕ್ ಫೋನ್ಸೆಕಾ ಮೂಲಕ ಈ ಪನಾಮಾ ಪ್ರಮುಖ ದಾಖಲೆ ಪತ್ರಗಳು ಲೀಕ್ ಆಗಿದ್ದವು. ಇದು 1977-2015 ರ ನಡುವಿನ 11.5 ಮಿಲಿಯನ್ ಪತ್ರಗಳನ್ನು ಲೀಕ್ ಮಾಡಿತ್ತು. ವಿದೇಶೀ ಬ್ಯಾಂಕ್ ಖಾತೆಗಳಿರುವ 50 ದೇಶಗಳಿಂದ 140 ರಾಜಕೀಯ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಪಡಿಸಿತ್ತು. ಇವುಗಳಲ್ಲಿ ವಿವಿಧ ದೇಶಗಳ 12 ಜನ ಸದ್ಯ ಅಧಿಕಾರದಲ್ಲಿರುವವರು ಅಥವಾ ಮಾಜಿಗಳು. ಹಾಗೆಯೇ ಕ್ರೀಡಾಕಾರರು, ಸಿನಿಮಾ ತಾರೆಯರು, ಉದ್ಯಮಿಗಳೂ ಈ ಪಟ್ಟಿಯಲ್ಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಾಕ್ ಪ್ರಧಾನಿ ನವಾಜ್ ಷರೀಫ್ ಪ್ರಧಾನಿ ಹುದ್ದೆಯಿಂದ ಅನರ್ಹಗೊಂಡಿದ್ದಾರೆ.

Loading...
loading...
error: Content is protected !!