ಅರ್ನಾಬ್ “ಟೈಮ್ಸ್ ನೌ” ಬಿಡಲು ಕೇಜ್ರಿವಾಲ್ ಕಾರಣರಾದರಾ?

ಯಾವುದೇ ಹಿಂಜರಿಕೆಯಿಲ್ಲದೆ ತನಗನಿಸಿದ್ದನ್ನು ನೇರವಾಗಿ ಹೇಳುವ ಪತ್ರಕರ್ತ ಅರ್ನಾಬ್ ಗೋಸ್ವಾಮಿಯನ್ನು ತಿಳಿಯದವರ‌್ಯಾರು. ಟೈಮ್ಸ್ ನೌ ಚಾನೆಲ್ ಎಂದರೆ ಅದು ಅರ್ನಾಬ್ ಎಂಬ ಮಟ್ಟಕ್ಕೆ ಅವರು ಪ್ರಸಿದ್ಧರಾಗಿದ್ದಾರೆ. ಆದರೆ ಟೈಮ್ಸ್ ನೌ ನಿಂದ ಅರ್ನಾಬ್ ಗೋಸ್ವಾಮಿ ಹೊರಗೆ ಬಂದಿದ್ದು ಮಾತ್ರ ನಮಗೆ ಗೊತ್ತೇ ವಿನಃ, ಆ ಚಾನೆಲ್ ಬಿಡಲು ಅಸಲಿ ಕಾರಣಗಳೇನು ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿತ್ತು. ಇದೀಗ ನ್ಯೂಸ್24 ಎಂಬ ಮತ್ತೊಂದು ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಕೆಲ ಮಹತ್ವದ ವಿಷಯಗಳನ್ನು ಅರ್ನಾಬ್ ಹಂಚಿಕೊಂಡಿದ್ದು ಟೈಮ್ಸ್ ನೌ ಅರ್ನಾಬ್ ಅವರನ್ನು ನಡೆಸಿಕೊಂಡ ರೀತಿಯನ್ನು ವಿವರಿಸಿದ್ದಾರೆ. ಅರ್ನಾಬ್ ‘ಟೈಮ್ಸ್ ನೌ’ ಚಾನೆಲ್ ನಿಂದ ದೂರವಾಗಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೇ ಕಾರಣ ಎಂದರೆ ನಂಬಲೇಬೇಕು!

ಅದು ಪ್ರಧಾನಿ ಮೋದಿ ನೋಟು ರದ್ದು ಮಾಡಿದ್ದ ಆರಂಭದ ದಿನಗಳು. ಮೋದಿ ಕ್ರಮ ವಿರೋಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು. ಆಗ ಅರ್ನಾಬ್ ಗೋಸ್ವಾಮಿ ಕೇಜ್ರಿವಾಲ್ ಕ್ರಮವನ್ನು ತೀಕ್ಷ್ಣ ಪದಗಳಲ್ಲಿ ಪ್ರಶ್ನಿಸಿ ಇದೊಂದು ಡ್ರಾಮಾ ಎಂದು ಜರೆದಿದ್ದರು. ಕೇಜ್ರಿವಾಲ್ ವಿರುದ್ಧ ಮಾತನಾಡಿದ ಮಾರನೆಯ ದಿನವೇ ಅರ್ನಾಬ್ ಗೆ ತಾವೇ ಕಟ್ಟಿ ಬೆಳೆಸಿದ್ದ ಸ್ಟುಡಿಯೋಗೆ ಪ್ರವೇಶ ನಿರಾಕರಿಸಿದರು. ಎರಡನೇ ದಿನದಿಂದ ಅವರ ಚಾನೆಲ್ ನಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ನೀಡದೆ ದೂರ ಇಟ್ಟುಬಿಟ್ಟರು. ಈ ಬೆಳವಣಿಗೆಯೇ ಅವರಿಗೆ ತುಂಬಾ ಬೇಸರವನ್ನುಂಟು ಮಾಡಿ ಕೊನೆಗೆ ಅಲ್ಲಿಂದ ಹೊರಗೆ ಬರಲು ಕಾರಣವಾಯಿತು.

ಕಠಿಣವಾಗಿ ಪ್ರಶ್ನೆ ಮಾಡುವುದೇ ತಪ್ಪಾ ಎಂದು ಪ್ರಶ್ನಿಸುವ ಅರ್ನಾಬ್, ಯಾವುದೇ ಪಕ್ಷಪಾತವಿಲ್ಲದೆ, ಇತರೆ ಚಾನೆಲ್ ನವರು ರಾಜಿಯಾಗುವಂತಹ ವಿಷಯಗಳನ್ನೂ ತಾವು ರಾಜಿಯಾಗದೇ ಪ್ರಶ್ನಿಸಲು ಸ್ವಂತ ಚಾನೆಲ್ ಆರಂಭಿಸುವುದಾಗಿ ಟೈಮ್ಸ್ ನೌ ನಿಂದ ಹೊರಬಂದ ನಂತರ ಹೇಳಿದ್ದರು. ತಮ್ಮ ಚಾನೆಲ್ ಗೆ “ರಿಪಬ್ಲಿಕ್” ಎಂಬ ಹೆಸರಿಡಲೂ ನಿರ್ಧರಿಸಿದ್ದರು. ಆದರೆ “ರಿಪಬ್ಲಿಕ್” ಎಂಬ ಹೆಸರನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಬಾರದು ಎಂದು ಬಿಜೆಪಿ ಮುಖಂಡ ಸುಬ್ರಮಣ್ಯಸ್ವಾಮಿ‌ ವಿರೋಧಿಸಿದ್ದರಿಂದ “ರಿಪಬ್ಲಿಕ್ ಟಿವಿ” ಎಂದು ನಾಮಕರಣ ಮಾಡಲು ತೀರ್ಮಾನಿಸಿದ್ದಾರೆ.

Loading...

Leave a Reply

Your email address will not be published.

error: Content is protected !!