ರಾಹುಲ್ ಗೆ ಆರ್.ಎಸ್.ಎಸ್ ನಿಂದ ಆಹ್ವಾನ

ನವದೆಹಲಿ: ತಾನೂ ಭಗವದ್ಗೀತೆಯನ್ನು ಓದುತ್ತಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿರುವ ಬೆನ್ನಲ್ಲೇ, ರಾಹುಲ್ ಮಾತಿಗೆ ಆರ್.ಎಸ್.ಎಸ್ ಮುಖಂಡ ಇಂದ್ರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿಯನ್ನು ಆರ್.ಎಸ್.ಎಸ್ ಗೆ ಇಂದ್ರೇಶ್ ಕುಮಾರ್ ಆಹ್ವಾನಿಸಿದ್ದು, ಆರ್.ಎಸ್.ಎಸ್ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ರಾಹುಲ್ ಗಾಂಧಿ ಹಾಜರಾಗಲಿ, ಆಗಲಾದರೂ ಅವರಿಗೆ ಭಾರತವೆಂದರೆ ಏನೆಂದು ಅರ್ಥವಾಗುತ್ತದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಕಳೆದ ವಾರ ಚೆನ್ನೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ತಾನೂ ಭಗವದ್ಗೀತೆ, ಉಪನಿಷತ್ ಗಳನ್ನು ಓದುತ್ತಿದ್ದೇನೆ ಎಂದು ಹೇಳಿ ಬಿಜೆಪಿ ಮತ್ತು ಆರ್.ಎಸ್.ಎಸ್ ವಿರುದ್ಧ ಕಿಡಿ ಕಾರಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಆರ್.ಎಸ್.ಎಸ್ ಮುಖಂಡ ಇಂದ್ರೇಶ್ ಕುಮಾರ್ “ರಾಹುಲ್ ಗಾಂಧಿ ಭಗವದ್ಗೀತೆ, ಪುರಾಣಗಳು ಓದಿದರೆ ಮುಂದಿನ ದಿನಗಳಲ್ಲಿ ಆರ್.ಎಸ್.ಎಸ್ ನಲ್ಲಿ ಸೇರಲು ಬಯಸುತ್ತಾರೆ” ಎಂದು ಹಾಸ್ಯ ಚಟಾಕಿ ಹಾರಿಸಿದರು.