ಹೌದು ಸೈನಿಕರಿಗೆ ನೀಡುವ ಊಟ ಚೆನ್ನಾಗಿಲ್ಲ... ಆದರೆ... |News Mirchi

ಹೌದು ಸೈನಿಕರಿಗೆ ನೀಡುವ ಊಟ ಚೆನ್ನಾಗಿಲ್ಲ… ಆದರೆ…

ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುವ ಸೈನಿಕರ ದಯನೀಯ ಸ್ಥಿತಿ ಬಗ್ಗೆ ತೇಜ್ ಯಾದವ್ ಬಹದೂರ್ ಫೇಸ್ಬುಕ್ ನಲ್ಲಿ ಹಾಕಿದ ವೀಡಿಯೋ ದೇಶಾದ್ಯಂತ ಸಂಚಲನವನ್ನೇ ಸೃಷ್ಟಿಸಿದೆ. ದೇಶ ವಿದೇಶಗಳಲ್ಲೂ ಈ ವಿಷಯ ಚರ್ಚಾಸ್ಪದವಾಗಿದೆ. ಹೀಗಾಗಿ ಈ ವಿಡಿಯೋದಲ್ಲಿನ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಬಾರ್ಡರ್ ಸೆಕ್ಯೂರಿಟಿ ಫೋರ್ಸ್(ಬಿಎಸ್ಎಫ್) ಇನ್ಸ್‌ಪೆಕ್ಟರ್ ಜನರಲ್ ಡಿ.ಕೆ ಉಪಾಧ್ಯಾಯ ಮಂಗಳವಾರ ಜಮ್ಮುವಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

ನಮ್ಮ ಸೈನಿಕರಿಗೆ ನೀಡುವ ಊಟ ಅಷ್ಟೇನೂ ಚೆನ್ನಾಗಿರುವುದಿಲ್ಲ. ಈ ವಿಷಯ ಎಲ್ಲರಿಗೂ ತಿಳಿದಿದೆ. ಅದರಲ್ಲೂ ಈಗ ಚಳಿಗಾಲವಾದ್ದರಿಂದ ಕೆಲ ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ ಇಲ್ಲಿಯವರೆಗೂ ಈ ವಿಷಯದಲ್ಲಿ ಯಾರೊಬ್ಬರೂ ದೂರು ನೀಡಿರಲಿಲ್ಲ. ಬಿಎಸ್ಎಫ್ ಇತಿಹಾಸದಲ್ಲೇ ಇಂತಹ ಘಟನೆ ನಡೆದಿರುವುದು ಇದೇ ಮೊದಲಾಗಿದ್ದು, ಎಲ್ಲರಿಗೂ ಶಾಕ್ ಅಗಿರುವುದು ಸತ್ಯ. ಸತ್ಯ ಹೇಳಬೇಕೆಂದರೆ ಇದೊಂದು ಸೂಕ್ಷ್ಮ ವಿಚಾರವಾದ್ದರಿಂದ ಕೂಡಲೇ ಯಾವುದೇ ಆದೇಶ ನೀಡಲಾರೆವು. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಐಜಿ ಉಪಾಧ್ಯಾಯ ಹೇಳಿದ್ದಾರೆ.

ಯೋಧ ತೇಜ್ ಬಹದೂರ್ ಯಾದವ್ ಪೊಸ್ಟ್ ಮಾಡಿದ ವೀಡಿಯೋದಲ್ಲಿನ ಅಂಶಗಳನ್ನು ಪಕ್ಕಕ್ಕಿಟ್ಟು ನೊಡಿದರೆ, ಕರ್ತವ್ಯನಿರತನಾಗಿದ್ದಾಗ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದೇಕೆ? ಎಂಬುದು ವಿವಾದಿತವಾಗಿದೆ. ಬಿಎಸ್ಎಫ್ ನಿಯಮಗಳ ಪ್ರಕಾರ ಕರ್ತವ್ಯದಲ್ಲಿದ್ದಾಗ ಮೊಬೈಲ್ ಗಳನ್ನು ಬಳಸಬಾರದು. ಸುತ್ತಮುತ್ತಲಿನ ದೃಶ್ಯಗಳನ್ನೆಲ್ಲಾ ಕಾಣಿಸುವಂತೆ ವೀಡಿಯೋದಲ್ಲಿ ಮಾತನಾಡಲಾಗಿದೆ. ಇದು ಕ್ಷಮಿಸಲಾರದ ಅಪರಾಧ ಎಂದು ಉಪಾಧ್ಯಾಯ ಹೆಳಿದ್ದಾರೆ.

ವಿಡಿಯೋ ಪೋಸ್ಟ್ ಮಾಡಿದ್ದ ತೇಜ್ ಬಹದೂರ್ ಯಾದವ್, ಈ ಹಿಂದೆ(2010) ರಲ್ಲಿಯೂ ಒಮ್ಮೆ ಶಿಸ್ತು ನಿಯಮಗಳನ್ನು ಉಲ್ಲಂಘಿಸಿದ್ದರು. ಕೋರ್ಟ್ ಮಾರ್ಷಲ್ ಗೆ ಗುರಿಯಾಗುವ ಪರಿಸ್ಥಿತಿಯನ್ನು ಸೃಷ್ಟಿಸಿಕೊಂಡಿದ್ದರು. ಕುಟುಂಬ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆತನನ್ನು ಕ್ಷಮಿಸಲಾಗಿತ್ತು.

ವೀಡಿಯೋ ವೈರಲ್ ಆಗಿದೆ ಎಂದು ತಿಳಿಯುತ್ತಿದ್ದಂತೆ ಡಿಐಜಿ ದರ್ಜೆಯ ಅಧಿಕಾರಿಯೊಬ್ಬರು ತೇಜ್ ಬಹದೂರ್ ಕಾರ್ಯನಿರ್ವಹಿಸುತ್ತಿದ್ದ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದರು. ಆ ಸಮಯದಲ್ಲಿ ತೇಜ್ ಬಹದೂರ್ ರವರಿಂದಾಗಲೀ, ಇತರೇ ಯೋಧರಿಂದಾಗಲೀ ಯಾವುದೇ ದೂರು ಬಂದಿಲ್ಲ. ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಆತನನ್ನು ಬೇರೊಂದು ಹೆಡ್ ಕ್ವಾರ್ಟರ್ಸ್ ಗೆ ವರ್ಗಾಯಿಸಲಾಗಿದೆ ಎಂದರು.

Loading...
loading...
error: Content is protected !!