ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ಡ್ರಗ್ಸ್ ನೀಡಿ ದರೋಡೆ

ಮುಂಬೈ-ನವದೆಹಲಿ ನಡುವೆ ಪ್ರಯಾಣಿಸುವ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಕೆಲ ದುಷ್ಕರ್ಮಿಗಳು ಡ್ರಗ್ಸ್ ನೀಡಿ ದರೋಡೆ ನಡೆಸಿದ್ದಾಗಿ ಪ್ರಯಾಣಿಕರು ದೂರು ನೀಡಿದ್ದಾರೆ. ಸುಮಾರು ರೂ.12 ಲಕ್ಷ ನಗದು ದರೋಡೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೆಹಲಿಯ ನಿಜಾಮುದ್ದೀನ್ ರೈಲ್ವೇ ನಿಲ್ದಾಣದಲ್ಲಿ ರೈಲು ನಿಂತಾಗ ದರೋಡೆ ನಡೆದಿರಬಹುದು ಎಂದು ಶಂಕಿಸಲಾಗುತ್ತಿದೆ.

ರಾಜಸ್ಥಾನದ ಕೋಟ ರೈಲ್ವೇ ನಿಲ್ದಾಣದಲ್ಲಿ ರೈಲು ಸಿಬ್ಬಂದಿ ಬದಲಾಗಿದ್ದು, ಆ ಸಮಯದಲ್ಲಿ ರೈಲಿನಲ್ಲಿ ಭದ್ರತಾ ಸಿಬ್ಬಂದಿಯೂ ಇಲ್ಲ ಎಂದು ಮಹಿಳಾ ಪ್ರಯಾಣಿಕರೊಬ್ಬರು ಹೇಳಿದ್ದಾರೆ. ತನ್ನ ರೂ. 50 ಸಾವಿರ ನಗದು ಸೇರಿದಂತೆ ಕೆಲ ಬೆಲೆ ಬಾಳುವ ವಸ್ತುಗಳು ಕಳುವಾಗಿವೆ ಎಂದು ಆ ಮಹಿಳೆ ಹೇಳಿದ್ದಾರೆ. ತಮಗೆ ಡ್ರಗ್ಸ್ ನೀಡಿದ್ದರಿಂದ ನಾವು ಎಚ್ಚರತಪ್ಪಿದೆವು. ಬೆಳಗಾಗುವವರೆಗೂ ನಮಗೆ ಎಚ್ಚರವಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಕಳ್ಳತನವಾಗಿರುವುದಾಗಿ ಮಹಿಳೆಯೊಬ್ಬರು ಕಿರುಚಾಡುವವರೆಗೂ ನಮಗೆ ಕಳ್ಳತನವಾದ ವಿಷಯ ತಿಳಿದಿರಲಿಲ್ಲ. ಸುಮಾರು ಆರು ಜನ ಪ್ರಯಾಣಿಕರ ವಸ್ತುಗಳು ಕಳ್ಳತನವಾಗಿವೆ ಎಂದು ರೈಲ್ವೇ ಪೊಲಿಸರು ಹೇಳಿದ್ದು, ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.